ತುಳುನಾಡಿನ ಬ್ಯಾರಿ ಸಮುದಾಯದ ಕುರಿತಂತೆ ಹಲವು ಸಂಶೋಧನಾ ಲೇಖನಗಳು ಹೊರ ಬಂದಿವೆ. ತಮ್ಮ ಅಸ್ಮಿತೆಯ ಕುರಿತಂತೆ ತೀವ್ರ ಅಜ್ಞಾನದಲ್ಲಿದ್ದ ಕಾಲಘಟ್ಟದಲ್ಲಿ ಕೆಲವು ಅಕ್ಷರಸ್ಥ ಬ್ಯಾರಿ ಸಮುದಾಯದ ಜನರು ತಮ್ಮ ಮೂಲವನ್ನು, ಗುರುತನ್ನು ಹುಡುಕುವ ಪ್ರಯತ್ನ ಮುಂದುವರಿದು, ಬಳಿಕ ತಮ್ಮ ಸ್ಥಾನಮಾನವನ್ನು ಗಟ್ಟಿಗೊಳಿಸುವ ಚಳುವಳಿಯಾಗಿ ಅದು ಬೆಳೆಯಿತು. ಈ ಸಂದರ್ಭದಲ್ಲಿ ಹಲವು ಲೇಖಕರು ಬರೆದ ಲೇಖನ, ಕನ್ನಡದಲ್ಲಿ ಹೊಸ ಹೊಳಹುಗಳಾಗಿ ಹೊರಹೊಮ್ಮಿದವು. ತುಳುನಾಡಿನ ಬ್ಯಾರಿಗಳ ಕುರಿತಂತೆ ಇನ್ನೊಂದು ಭಿನ್ನ ನೋಟವನ್ನು ನೀಡುವ ಪುಸ್ತಕ ಪಿ.ಕೆ. ಶಂಸುದ್ದೀನ್ ಉಳ್ಳಾಲ ಅವರು ಬರೆದಿರುವ ತುಳುನಾಡಿನ ಮಾಪ್ಲಾ ಬ್ಯಾರಿಗಳು. ಇದೊಂದು ಕಿರು ಅಧ್ಯಯನ ಪುಸ್ತಕ. ಹಲವರ ಸಂಶೋಧನೆಗಳನ್ನು ಪ್ರಶ್ನಿಸುತ್ತಾ ಶಂಸುದ್ದೀನ್, ಬ್ಯಾರಿ ಸಮುದಾಯದ ಕುರಿತಂತೆ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ. ಲೇಖಕರೇ ಹೇಳುವಂತೆ ತುಳುನಾಡಿನ ಮಾಪ್ಲಾಗಳು ತಮ್ಮನ್ನು ಬ್ಯಾರಿಗಳೆಂದು ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಬ್ಯಾರಿ ಅಕಾಡಮಿ ಕೂಡ ಇದರ ಭಾಗ. ಕೇರಳದಲ್ಲಿ ಮುಸ್ಲಿಮರಾದ ಮಾಪ್ಲಾಗಳು, ತಮ್ಮನ್ನು ಆ ಹೆಸರಿನಲ್ಲಿ ಕರಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಹಾಗೂ ಆ ಹೆಸರನ್ನು ಮರೆ ಮಾಚಲು ಪ್ರಯತ್ನಿಸುತ್ತಾರೆ. ತಮ್ಮನ್ನು ಕೇರಳ ಮುಸ್ಲಿಮರು ಅಥವಾ ಮಲಬಾರ್ ಮುಸ್ಲಿಮರು ಎಂಬುದಾಗಿ ಕರೆಸಿಕೊಳ್ಳುವುದು ಉತ್ತಮವೆಂದು ಅಲ್ಲಿನ ಜನರು ಅಭಿಪ್ರಾಯ ಪಡುತ್ತಾರೆ. ಹೀಗೆ ಹಲವು ಪ್ರಮುಖ ವಿಷಯಗಳ ಕುರಿತು ಲೇಖಕರು ಈ ಕೃತಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
©2024 Book Brahma Private Limited.