ಸಾಹಿತಿಗಳಾದ ಡಾ. ಲಿಂಗದಹಳ್ಳಿ ಹಾಲಪ್ಪ ಹಾಗೂ ಕೆ. ವೆಂಕಟೇಶ ಅವರು ಜಂಟಿಯಾಗಿ ರಚಿಸಿರುವ ಕೃತಿ-ಕರ್ನಾಟಕ ಸಾಮ್ರಾಜ್ಯ ವಿಜಯನಗರ. ಪಶುಪಾಲನಾ ಸಂಸ್ಕೃತಿಯನ್ನು ಅನಾವರಣ ಮಾಡಿದ್ದಾಗಿ ಕೃತಿಗೆ ನೀಡಿರುವ ಉಪಶೀರ್ಷಿಕೆ ಸೂಚಿಸುತ್ತದೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಪ್ರೊ. ಎಫ್.ಟಿ. ಹಳ್ಳಿಕೇರಿ ಅವರು ‘ಈ ಕೃತಿಯು ಆಧುನಿಕ ಸಂಶೋಧನೆಯ ಒಂದು ಭಾಗವಾಗಿ, ಸಂಶೋಧನೆಯ ನವೀನ ಆಯಾಮಗಳನ್ನು ಪರಿಚಯಿಸುತ್ತಾ, ಹೊಸ ಬೆಳಕನ್ನು ಚೆಲ್ಲುವ ಮಹತ್ವದ ಕೃತಿಯಾಗಿ ನಿಲ್ಲುತ್ತದೆ. ಇಲ್ಲಿಯ ಅಧ್ಯಯನದ ಕೇಂದ್ರಬಿಂದು-‘ವಿರೂಪಾಕ್ಷ’ ಸಾಂಪ್ರದಾಯಿಕ ಅಧ್ಯಯನಗಳ ರೂಪುರೇಷೆಗಳನ್ನು ಪಕ್ಕಕ್ಕೆ ಸರಿಸಿಟ್ಟು, ವಿರೂಪಾಕ್ಷನ ದೇಸಿ ಮೂಲವನ್ನು ವಿಶ್ಲೇಷಿಸಿ, ಅವನನ್ನು ಜನಪದರ ಮುಂದೆ ನಿಲ್ಲಿಸಲಾಗಿದೆ. ಪ್ರಾಚೀನ ಕಾಲದಲ್ಲಿ ವಿರೂಪಾಕ್ಷನಾಗಿರದೇ, ಪಂಪಾಪತಿ ಎಂದು ಕರೆಯಿಸಿಕೊಂಡಿದ್ದ ಇವನು, ಮೂಲದಲ್ಲಿ ಮೈಲಾರನೇ ಎಂಬ ಪ್ರಶ್ನೆಗೆ ಆಚರಣೆಗಳ ಮೂಲಕ ಸಮರ್ಥ ಉತ್ತರವನ್ನು ಕಂಡುಕೊಳ್ಳಲಾಗಿದೆ. ಎರಡನೆಯದಾಗಿ, ಜನಪದರ ಭಾವನಾತ್ಮಕ ನಂಟು, ಶಿಲ್ಪ, ಜನಪದರ ಗೀತೆ-ಆಚರಣೆಗಳನ್ನು ಹಂತಹಂತವಾಗಿ ವಿಶ್ಲೇಷಿಸುತ್ತಾ, ‘ಪಶುಪಾಲಕರ ದೈವ ಬೀರಪ್ಪನೇ ಹೌದು’ ಎಂಬ ಜಿಜ್ಞಾಸೆಗೆ ಉತ್ತರವನ್ನು ಪಡೆಯುವಂತೆ ಓದುಗರನ್ನು ಕೃತಿ ಕಟ್ಟಿಹಾಕುತ್ತದೆ. ಮೈಲಾರ-ಬೀರದೇವರು ಇಬ್ಬರೂ ಅಭಿನ್ನರು. ಕಾಲಭೈರವನ ಅಂಶಗಳೆಂದು ಓದುಗ ನಿರ್ಣಯಿಸುವಂತೆ ಕೃತಿಯ ಸಂಶೋಧನೆಯು ಪ್ರಭಾವ ಬೀರುತ್ತದೆ. ಸಾಮ್ರಾಟರ ಕುಲಮೂಲ ಚರ್ಚೆಯೂ ಈ ಕೃತಿಯ ವೈಶಿಷ್ಟ್ಯವಾಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.