ಜಿ.ಎನ್.ಉಪಾಧ್ಯ ಅವರ ಕೃತಿ ‘ವಾಙ್ಮಯ ವಿವೇಕ: ಡಾ.ಬಿ.ಜನಾರ್ಧನ ಭಟ್ ಅವರ ಸಾಹಿತ್ಯ ಸಮೀಕ್ಷೆ’. ಈ ಕೃತಿಗೆ ಡಾ.ನಾ.ಮೊಗಸಾಲೆ ಅವರು ಬೆನ್ನುಡಿ ಬರೆದಿದ್ದಾರೆ. ‘ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯರು ವಿದ್ವತ್ತು ಮತ್ತು ಅಧ್ಯಯನಶೀಲತೆಗೆ ಹೆಸರಾದವರು. ಕ್ಷೇತ್ರಕಾರ್ಯ, ಆಳವಾದ ಸಂಶೋಧನೆ ಹಾಗೂ ಅಧ್ಯಯನಗಳನ್ನು ನಡೆಸಿ ಹೊಸ ಹೊಸ ವಿಚಾರಗಳನ್ನು ಮಂಡಿಸುತ್ತಾ ಇರುವ ಅವರು ಮಹಾರಾಷ್ಟ್ರದಲ್ಲಿ ಕನ್ನಡದ ರಾಯಭಾರಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಮುಂಬಯಿ ಕೇಂದ್ರದ ಅಘೋಷಿತ ನಾಯಕರಾಗಿರುವ ಅವರು ಒಳನಾಡಿನ ಮತ್ತು ಹೊರನಾಡಿನ ಸಾಹಿತಿಗಳ ಕೊಡುಗೆಯ ಸಮಗ್ರ ಅಧ್ಯಯನಗಳನ್ನು ಸ್ವತಃ ಮಾಡುತ್ತಾ ತಮ್ಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಅವರಿಂದ ಅಧ್ಯಯನ ಮಾಡಿಸಿ ಕೃತಿಗಳನ್ನು ಪ್ರಕಟಿಸುತ್ತಾ ಮಹತ್ವದ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಈಗ ಅವರು ಪ್ರಕಟಿಸುತ್ತಿರುವ 'ವಾಙ್ಮಯ ವಿವೇಕ: ಡಾ. ಬಿ. ಜನಾರ್ದನ ಭಟ್ ಅವರ ಸಾಹಿತ್ಯ ಸಮೀಕ್ಷೆ' ಕೃತಿ ಒಬ್ಬ ಪ್ರಮುಖ ಸಾಹಿತಿಯ ಸಾಧನೆಯನ್ನು ಸಮೀಚೀನವಾಗಿ ಪರಿಚಯಿಸುತ್ತದೆ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಡಾ. ಬಿ. ಜನಾರ್ದನ ಭಟ್ ಅವರು ನಮ್ಮ ನಡುವಿನ ಒಬ್ಬ ಬಹುಮುಖ್ಯ ಲೇಖಕರು ಮತ್ತು ಅಧ್ಯಯನಶೀಲ ವಿದ್ವಾಂಸರು, ಕತೆ, ಕಾದಂಬರಿ, ವಿಮರ್ಶೆ, ಸಂಸ್ಕೃತಿ ಚಿಂತನೆ, ಅನುವಾದ, ಸಂಪಾದನೆ ಮೊದಲಾದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಮತ್ತು ಪರಿಶ್ರಮವುಳ್ಳ ಅವರು ತಮ್ಮ ಕಾದಂಬರಿಗಳು ಮತ್ತು ಕತೆಗಳಲ್ಲಿ ಕಳೆದುಹೋದ ದಿನಗಳನ್ನು ವರ್ತಮಾನದ ಕಣ್ಣಲ್ಲಿ ವಸಾಹತುಶಾಹಿ ಮತ್ತು ನವ ವಸಾಹತುಶಾಹಿಯು ನಮ್ಮ ವರ್ತಮಾನವನ್ನು, ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗವನ್ನು ಹೇಗೆ ತಲ್ಲಣದತ್ತ ಕರೆದೊಯ್ಯುತ್ತಿದೆ ಎನ್ನುವುದನ್ನು ವಾಸ್ತವದ ನೆಲೆಗಟ್ಟಿನಲ್ಲಿ ತೆರೆದಿಡುತ್ತಾರೆ. ಅವರು ಸಂಪಾದಿಸಿರುವ 'ದಕ್ಷಿಣ ಕನ್ನಡದ ಶತಮಾನದ ಕಾವ್ಯ', 'ದ.ಕನ್ನಡದ ಶತಮಾನದ ಕತೆಗಳು ಹಾಗೂ 'ಓಬೀರಾಯನ ಕತೆಗಳು' ಅವರ ಅಧ್ಯಯನಶೀಲತೆ ಮತ್ತು ಒಳನೋಟಗಳಿಂದ ವಿದ್ವಜ್ಜನರ ಮನ್ನಣೆಗೆ ಪಾತ್ರವಾಗಿವೆ. ಇದುವರೆಗೆ 84 ಕೃತಿಗಳನ್ನು ಪ್ರಕಟಿಸಿರುವ ಅವರು, ನಾಡಿನ ಸಾಹಿತ್ಯ ಸೇವೆಯನ್ನು ಒಂದು ವ್ರತದಂತೆ ಮಾಡುತ್ತಾ ಬರುತ್ತಿದ್ದಾರೆ’ ಎಂಬುದಾಗಿ ಡಾ. ನಾ. ಮೊಗಸಾಲೆ ಬೆನ್ನುಡಿಯಲ್ಲಿ ತಿಳಿಸಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಎಂಟು ಅಧ್ಯಾಯಗಳಿದ್ದು, ಜೀವನ- ಸಾಧನೆ, ಡಾ.ಭಟ್ ಅವರೊಂದಿಗೆ ಮಾತುಕತೆ, ಕಾದಂಬರಿಕಾರರಾಗಿ ಸೈ ಎನಿಸಿಕೊಂಡ ಬಗೆ, ಕನ್ನಡ ವಿಮರ್ಶೆಗೆ ಡಾ.ಭಟ್ ಅವರ ಕೊಡುಗೆ, ಭಿನ್ನ ಪರಿಚಯ ಕತೆಗಾರರಾಗಿ, ಭಾಷಾಂತರಕಾರರಾಗಿ ಮಿಂಚಿದ ಬಗೆ, ಮಾದರಿ ಕೃತಿ ಸಂಪಾದನ ಕಾರ್ಯ ಹಾಗೂ ಸಮಾರೋಪ ಎಂಬ ಶೀರ್ಷಿಕೆಗಳಿವೆ.
©2024 Book Brahma Private Limited.