‘ಕೇಬಿ ಕಾವ್ಯ- ಕಣ್ಣು ಧರಿಸಿ ಕಾಣಿರೋ’ ಡಾ. ರವಿಕುಮಾರ್ ನೀಹ ಅವರ ಸಂಶೋಧನಾತ್ಮಕ ಕೃತಿ. `ಬಕಾಲ ಕವಿ' ಎಂದೇ ಪ್ರಸಿದ್ಧರಾಗಿದ್ದ ದಿ. ಕೆ.ಬಿ. ಸಿದ್ಧಯ್ಯನವರ ಕಾವ್ಯದ ಕುರಿತು ದೀರ್ಘ ಅಧ್ಯಯನವಾಗಿದೆ. ಕುಲಕಥನಗಳ ವೈಶಿಷ್ಟ್ಯಗಳನ್ನು ನಿಕಷಕ್ಕೊಡ್ಡುವ ಮೂಲಕ ಅದುವರೆಗೂ ಅಪರಿಚಿತವಾದ ಅಧೋಲೋಕಗಳನ್ನು ಪರಿಚಯಿಸುವ ಕೆಲಸವನ್ನು ಸಂಶೋಧಕರು ಮಾಡಿದ್ದಾರೆ.
‘ಕೆ.ಬಿ. ಸಿದ್ಧಯ್ಯ ಕನ್ನಡ ಕಾವ್ಯಲೋಕದಲ್ಲಿ ಅವಜ್ಞೆಗೆ ಒಳಗಾದ ಕವಿಯೆಂದು ಅನೇಕರು ಭಾವಿಸಿದ್ದಾರೆ. ಅವರು ಅದನ್ನೊಂದು ಚೈತನ್ಯವಾಗಿಸಿಕೊಂಡು ಹೊಸ ಕಾವ್ಯರೂಪಕವನ್ನೇ ಧಾರೆಯೆರೆದು ಕೊಟ್ಟ ಇತಿಹಾಸ ನಮ್ಮೆದುರಿಗಿದೆ. ಅವರ ಕಾವ್ಯದ ಓದು ಬರೀ ಓದಷ್ಟೇ ಆಗಿರದೆ ಪ್ರದರ್ಶನದಂತೆ ಕಾಣುತ್ತಿತ್ತು. ನಿಜಕ್ಕೂ ಅವರೊಬ್ಬ ಗ್ರೀಕ್ ಪ್ರದರ್ಶನಕಾರನಂತೆ ಕಾಣುತ್ತಿದ್ದರು’ ಎನ್ನುತ್ತಾರೆ ಕತೆಗಾರ ಹಾಗೂ ಕೃತಿಗೆ ಬೆನ್ನುಡಿ ಬರೆದ ವಿ.ಎಂ. ಮಂಜುನಾಥ.
‘ಕಾವ್ಯವನ್ನು ಅರ್ಥೈಸಿಕೊಳ್ಳಲು ಹೊಸ ಮಾನದಂಡಗಳನ್ನು ರೂಪಿಸಿಕೊಳ್ಳಬೇಕಾದ ತುರ್ತು ಇರುವ ಸಂದರ್ಭದಲ್ಲಿ ರವಿಕುಮಾರ್ ನೀಹ ನಡೆಸಿರುವ ಈ ಸಂಶೋಧನೆ ಮಹತ್ತರವಾದದ್ದು ಮತ್ತು ಅಭ್ಯಾಸಯೋಗ್ಯವಾಗಿದೆ. ಕಾವ್ಯದ ಹೊಳಪನ್ನು ಎಲ್ಲೂ ಕಳೆಗುಂದಿಸದೆ ಬೆಳದಿಂಗಳನ್ನೇ ಬೊಗಸೆ ತುಂಬಿ ಕೊಟ್ಟಿದ್ದಾರೆ’ ಎಂದೂ ಪ್ರಶಂಸಿಸಿದ್ದಾರೆ..
©2025 Book Brahma Private Limited.