ಲೇಖಕಿ ಡಾ. ಕಸ್ತೂರಿ ದಳವಾಯಿ ಅವರ ವಿಮರ್ಶಾ -ಸಂಶೋಧನಾ ಕೃತಿ- ಕಥೆ -ಕಾದಂಬರಿಗಳಲ್ಲಿ ಮುಸ್ಲಿಂ ಮಹಿಳಾ ಸಂವೇದನೆ. ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಪ್ರಕಾರಗಳಾದ ಸಣ್ಣಕಥೆ ಹಾಗೂ ಕಾದಂಬರಿಗಳನ್ನು ಸೇರಿಸಿ ಇಲ್ಲಿ ಕಥನ ಸಾಹಿತ್ಯವನ್ನು ಗುರುತಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ ಗಳಿಗೆ ಒಂದು ಪರಂಪರೆ ಇದೆ. ದಲಿತ ಸಂವೇದನೆ, ಮುಸ್ಲಿಂ ಸಂವೇದನೆಗಳು ವಿಶಿಷ್ಟವಾಗಿ ಕಾಣುವಂತೆ, ಮಹಿಳಾ ಸಂವೇದನೆಗಳನ್ನು ವಿಶೇಷವಾಗಿ ಅಧ್ಯಯನ ಮಾಡುವ ಅವಶ್ಯಕತೆ ಇದೆ. ಸಂವೇದನೆಯ ಸ್ವರೂಪ ಸಂಕೀರ್ಣವಾದದ್ದು ಸರಳಿಕರಣದ್ದಲ್ಲ ಎಂಬ ಎಚ್ಚರದೊಂದಿಗೆ ಅವರು ಮುಸ್ಲಿಂ ಮಹಿಳಾ ಸಂವೇದನೆಯನ್ನು ಕಥನ ಸಾಹಿತ್ಯದ ಸಂದರ್ಭದಲ್ಲಿ ಶೋದಿಸಿಕೊಳ್ಳಲು ಯತ್ನಿಸಿರುವುದು ಸಂಶೋಧಕರ ಪ್ರಾಮಾಣಿಕತೆಗೆ ಕನ್ನಡಿ ಹಿಡಿದಂತಿದೆ. .
ಕೌಟುಂಬಿಕ ಸಾಮಾಜಿಕ ಸಂದರ್ಭದ ಸಂಘರ್ಷದ ನೆಲೆಗಳಲ್ಲಿ ಏರ್ಪಡುವ ತಾರತಮ್ಯಗಳನ್ನು ಗುರುತಿಸುವಾಗ, ಸ್ವಾತಂತ್ರ್ಯ-ಸಮಾನತೆಗಳಂತಹ ಮಾನವೀಯ ಅಗತ್ಯಗಳನ್ನು ಹುಡುಕುವಾಗ ಸಂವೇದನೆಯನ್ನು ಒಂದು ಸಮುದಾಯದ ಸೀಮಿತ ಚೌಕಟ್ಟಿಗೆ ಒಳಪಡಿಸಬಹುದು. ಎಂಬ ಅನಿಸಿಕೆ ಮೂಡಬಲ್ಲದು. ಇಂತಹ ಗಂಭೀರ ವಾಗ್ವಾದಗಳನ್ನು ಹುಟ್ಟುಹಾಕಲು ಡಾ. ಕಸ್ತೂರಿ ದಳವಾಯಿಯವರ ಈ ಸಂಶೋಧನಾ ಕೃತಿ ಕಾರಣವಾಗುತ್ತಿರುವುದು ಅವರ ಕುರಿತಾಗಿ ಇನ್ನು ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟಿಸುವಂತಿದೆ. ಹೀಗಾಗಿ ಇಲ್ಲಿ ಮುಸ್ಲಿಂ ಕತೆಗಾರರು, ಕಾದಂಬರಿಕಾರರನ್ನು ನಿರ್ದರ್ಶನ ವಾಗಿಟ್ಟುಕೊಂಡು ಶೋಧನೆಗೆ ತೊಡಗಿರುವುದು ಸಹಜವೇ. ಕಲಾತ್ಮಕ ಸಂವೇದನೆ,ಸೃಜನಶೀಲ ಸಂವೇದನೆ ಮಾನವೀಯ ಸಂದರ್ಭಗಳನ್ನು ಸೃಷ್ಟಿಸಿ ಹೇಗೆ ಸಮುದಾಯ ಪ್ರಜ್ಞೆ ಬದಲಾಯಿಸಲು ಸಾಧ್ಯ ಎಂಬುದನ್ನು ಸಂಶೋಧಕಿ ಪ್ರತಿಪಾದಿಸಿದ್ದಾರೆ..
ಪಾತ್ರಗಳು ಹಾಗೂ ಸನ್ನಿವೇಶಗಳ ಮೂಲಕ ಹೇಗೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಕಾನೂನು ಹೋರಾಟ ನಡೆಸಬೇಕಾಗಿ ಬಂತು ಎಂಬ ಸಂಗತಿಗಳೂ ಇಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಸಂಶೋಧನೆಯ ಅಂತಿಮಗುರಿ ಬದುಕನ್ನು ಮಾನವೀಯವಾಗಿ ಪರಿವರ್ತಿಸುವ ಸಾಧ್ಯತೆಗಳ ಹುಡುಕಾಟವೇ ಎಂಬುದು ಸಾಬೀತಾಗುತ್ತದೆ.ಒಟ್ಟಾರೆ ಮಹಿಳಾ ಸಂವೇದನೆಗೆ ಒತ್ತುಕೊಟ್ಟು ಕತೆ-ಕಾದಂಬರಿಗಳ ಸನ್ನಿವೇಶಗಳ ಪಾತ್ರಗಳನ್ನು ಪರಿಶೀಲಿಸುವುದು ವಿಶೇಷ. ಪ್ರಧಾನ ಸಂಸ್ಕೃತಿಗಳು, ಉಪ ಸಂಸ್ಕೃತಿಗಳನ್ನು ಪಕ್ಕಕ್ಕೆ ತಳ್ಳುವ ಪ್ರಕ್ರಿಯೆ ಮುಸ್ಲಿಂ ಸಮುದಾಯ ಹೇಗೆ ಉಪೇಕ್ಷೆಗೆ ತುತ್ತಾಗಿ ಅನಾಥ, ಅಭದ್ರತೆಗಳನ್ನು ಅನುಭವಿಸುತ್ತಾರೆ ಎಂಬುದನ್ನೂ ಸಂಶೋಧಕಿ ಡಾ.ದಳವಾಯಿಯವರು ಗುರುತಿಸಿರುವುದು ಗಮನಾರ್ಹ.
©2024 Book Brahma Private Limited.