ವಿರೂಪಾಕ್ಷಪ್ಪ ಕೋರಗಲ್ ಅವರು ಕಳೆದ ಮೂವತ್ತು ವರ್ಷಗಳಿಂದ ಜೈನ ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡುತ್ತಾ ಬಂದಿದ್ದಾರೆ. ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿರುವ ಎಲ್ಲಾ ಜೈನ ಕೇಂದ್ರಗಳನ್ನು ಸಂದರ್ಶಿಸಿ, ಜೈನಸಾಹಿತ್ಯ ಕೃತಿಗಳ ಹುಡುಕಾಟದಲ್ಲಿ ತೊಡಗಿದ್ದ ಅವರು, ಕನ್ನಡದ ಮೊಟ್ಟ ಮೊದಲ ಗಣಿತಜ್ಞ ರಾಜಾದಿತ್ಯನನ್ನು ಕುರಿತು ಸಂಶೋಧನೆಯಲ್ಲಿ ತೊಡಗಿದ್ದಾರೆ. ಅವರು ರಾಜಾದಿತ್ಯನನ್ನು ಕುರಿತು ಮಾಡಿದ ಸಂಶೋಧನಾ ಕೃತಿ ಗಣಿತ ವಿಳಾಸ ರಾಜಾದಿತ್ಯ ಅಮೋಘವಾದದ್ದು. ಆ ಕೃತಿಯನ್ನು ನಮ್ಮ ಸ್ವಾದಿ ಪ್ರಕಾಶನದಿಂದಲೇ ಪ್ರಕಟಿಸಿದ್ದೇವೆ. ವಿರುಪಾಕ್ಷಪ್ಪ ಅವರು ರಾಜಾದಿತ್ಯ ರಚಿಸಿದ 'ಆರು ಗಣಿತ ಕೃತಿಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳ ಸಂಪಾದನೆ ಮತ್ತು ಪರಿಷ್ಕರಣೆಯನ್ನು ಮಾಡುತ್ತಿದ್ದಾರೆ. ನಮ್ಮ ಸೋಂದಾ ಮಠದಿಂದ ರಾಜಾದಿತ್ಯನ ಎಲ್ಲಾ ಕೃತಿಗಳನ್ನು ಪ್ರಕಟಿಸುವ ಆಶ್ವಾಸನೆ ನೀಡಿರುವುದರಿಂದ ಲಭ್ಯವಿರುವ ಕೃತಿಗಳನ್ನೆಲ್ಲಾ ಸಿದ್ಧಗೊಳಿಸುತ್ತಿರುವುದು ಸಂತಸದ ವಿಷಯವಾಗಿದೆ. ಅವರ ಈ ಕಾರ್ಯ ಕನ್ನಡ ಶಾಸ್ತ್ರ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆಯಾಗಿದೆ. ನಮ್ಮ ಶ್ರೀ ಮಠದ ನಿಷ್ಠಾವಂತ ಭಕ್ತರಲ್ಲೊಬ್ಬರಾದ ಅವರು ಮಠದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಾ ಬಂದಿದ್ದಾರೆ. ಅವರ ಸಂಶೋಧನಾ ಕೃತಿಯ ಪ್ರಕಟಣೆಯ ನಂತರ ಈಗ ರಾಜಾದಿತ್ಯ ರಚಿಸಿದ ಭೂಅಳತೆಯ ಕ್ಷೇತ್ರ ಗಣಿತ ಬಿಡುಗಡೆಗೊಳ್ಳುತ್ತಿದೆ. ವಿದ್ವಾಂಸರಾದ ಅವರು ಇಂಥ ಇನ್ನೂ ಅನೇಕ ಮೌಲ್ಯಯುತ ಕೃತಿಗಳ ಮೇಲೆ ಬೆಳಕು ಚೆಲ್ಲುವ ಕಾರ್ಯದಲ್ಲಿ ತೊಡಗಿರಲೆಂದು ಅಪೇಕ್ಷಿಸುತ್ತೇವೆ ಎಂದು ಸ್ವಸ್ತಿ ಶ್ರೀಮದಭಿನವ ಭಟ್ಟಾಕಳಂಕ ಭಟ್ಟಾರಕ ಸ್ವಾಮಿಜಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.