ಎಮ್.ಆರ್. ಸತ್ಯನಾರಾಯಣ್ ಅವರ ‘ಕನಕದಾಸರ ವರಮೋಹನತರಂಗಿಣಿ’ ವ್ಯಾಖ್ಯಾನ-ವಿಶ್ಲೇಷಣೆ ಸಂಪುಟ-1 ಸುಮಾರು 2799 ಸಾಂಗತ್ಯ ಪದ್ಯಗಳ ಈ ಮಹಾನ್ ಕಾವ್ಯವು ವಿದ್ವಾಂಸರು ಹಾಗೂ ವಿಮರ್ಶಕರು ಇದುವರೆಗೆ ಮನಮೋಹಕವಾದ ಶೃಂಗಾರಕಾವ್ಯವೆಂದು ವರ್ಣಿಸಿ ವ್ಯಾಖ್ಯಾನಿಸಿದ ಕಾವ್ಯಶಿಲ್ಪ. ಶ್ರೀ ಕೃಷ್ಣ ರುಕ್ಮಿಣಿ, ಶ್ರೀ ಕೃಷ್ಣನ ಮಗ ಪ್ರದ್ಯುಮ್ನ- ಮಾಯಾವತಿ ಹಾಗೂ ಶ್ರೀಕೃಷ್ಣನ ಮೊಮ್ಮಗ ಅನಿರುದ್ಧ-ಉಷೆಯರ ಶೃಂಗಾರರಸಪರಿಪೂರ್ಣವಾದ ಲೀಲಾಕಥಾಮೃತವು ಈ ಕಾವ್ಯತರಂಗಿಣಿಯಲ್ಲಿ ಬತ್ತದ ನಿರಂತರ ಪ್ರವಾಹವಾಗಿ ಹರಿದು ರಸಿಕರ ಹೃದಯಸಾಗರಗಾಮಿನಿಯಾಗಿ ಸುಮಾರು ನಾಲ್ಕು ಶತಮಾನಗಳಿಂದಲೂ ಹರಿಯುತ್ತ ಬಂದಿದೆ. ಈ ಕಾವ್ಯತರಂಗಿಣಿಯಲ್ಲಿ ಯಾನ ಮಾಡುವುದು ಸುಲಭದ ಕೆಲಸವಲ್ಲ, ಯಾವುದೇ ನದೀಯಾನಕ್ಕೆ ಸುಮ್ಮ-ಸುಮ್ಮನೆ ಹೋಗಿ ಬರುವುದು ಅರ್ಥವಿಲ್ಲದ್ದು. ಅದಕ್ಕೆ ಮನಸ್ಸು, ಬುದ್ಧಿ, ಅಹಂಕಾರ ಮೊದಲಾದವುಗಳನ್ನು ಸಿದ್ಧಮಾಡಿಕೊಂಡು ತಮ್ಮನ್ನು ತಾವು ಆ ಯಾನದಲ್ಲಿ ತನ್ಮಯ ಮಾಡಿಕೊಂಡು ಹೊರಟರೆ ನದೀಯಾನವು ಅರ್ಥಪೂರ್ಣವಾಗುತ್ತದೆ ಎಂದು ಇಲ್ಲಿ ವಿವರಿಸಲಾಗಿದೆ. ಕೃತಿಯು ನಾಲ್ಕು ಭಾಗಗಳಾದ ಪ್ರವೇಶಿಕೆ, ಆಕರಗಳು, ಕಾವ್ಯಭಾಗ-ಪೀಠಿಕಾಸಂಧಿ(ಒಂದನೆಯ ಸಂಧಿ), ಸೌರಾಷ್ಟ್ರ ವರ್ಣನೆ(ಎರಡನೆಯ ಸಂಧಿ), ದ್ವಾರಕಾಪುರ ವರ್ಣನೆ(ಮೂರನೆಯ ಸಂಧಿ) ಕುರಿತ ವಿಚಾರಗಳನ್ನು ಇಲ್ಲಿ ಪಸ್ತುತಪಡಿಸಲಾಗಿದೆ. ಪ್ರತಿಯೊಂದು ಭಾಗವು ಇಲ್ಲಿ ಹಲವಾರು ವಿಚಾರಗಳೊಂದಿಗೆ ಪಠ್ಯದ ಸ್ಥೂಲ ಪರಿಚಯವನ್ನು ನೀಡುತ್ತದೆ.
©2024 Book Brahma Private Limited.