ಎನ್. ಸುರೇಶ್ ನಾಗಲಮಡಿಕೆ ಅವರು ನಡೆಸಿದ ಸಂಶೋಧನಾ ಪ್ರಬಂಧವಿದು. ಹದಿನೈದನೆಯ ಶತಮಾನದ ಸಂತಕವಿ ಕನಕದಾಸರು ಮತ್ತು ಅವರ ಬರವಣಿಗೆಯನ್ನು ಕುರಿತ ಸಾಂಸ್ಕೃತಿಕ ಅಧ್ಯಯನವಿದು. ಈ ಗ್ರಂಥದಲ್ಲಿ ಒಟ್ಟು ಏಳು ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯದಲ್ಲಿ ಸಮಕಾಲೀನ ಸಂದರ್ಭ ಮತ್ತು ಕನಕದಾಸರು ಕುರಿತ ಚರ್ಚೆಯು ಮುಂದಿನ ಅಧ್ಯಾಯಗಳಿವೆ ವೇದಿಕೆ ಕಲ್ಪಿಸುತ್ತದೆ. ಎರಡನೆಯ ಅಧ್ಯಾಯವು ಕನಕದಾಸರ ಸುತ್ತಮುತ್ತ ಚರ್ಚಿಸಿದರೆ ಮೂರನೇ ಅಧ್ಯಾಯದಲ್ಲಿ ಕನಕದಾಸರು ಮತ್ತು ಹರಿದಾಸ ಪರಂಪರೆ ಕುರಿತ ಚರ್ಚೆಯಿದೆ. ನಾಲ್ಕನೆಯ ಅಧ್ಯಾಯದಲ್ಲಿ ಕನಕದಾಸರ ಕಾಲದ ಕರ್ನಾಟಕ, ಐದನೆಯ ಅಧ್ಯಾಯದಲ್ಲಿ ಕನಕದಾಸರ ಕೃತಿಗಳ ಹಾಗೂ ಕೀರ್ತನೆಗಳ ಸಾಂಸ್ಕೃತಿಕ ಶೋಧ, ಆರನೆಯ ಅಧ್ಯಾಯದಲ್ಲಿ ಕನಕದಾಸರು ಚಿತ್ರಿಸಿದ ಜೀವನ, ಏಳನೆಯ ಅಧ್ಯಾಯದಲ್ಲಿ ಎಲ್ಲ ಚರ್ಚೆಗೆ ಒಂದು ಸ್ವರೂಪ ನೀಡಲಾಗಿದೆ. ಬೆನ್ನುಡಿಯಲ್ಲಿ ಟಿ.ಯಲ್ಲಪ್ಪ ಅವರು ’ಕನಕದಾಸರ ಕಾಲಘಟ್ಟದ ಚಾರಿತ್ರಿಕ ಹಾಗೂ ಧಾರ್ಮಿಕ ಸಂಘರ್ಷ ಮತ್ತು ಸಂಕಥನದ ಸುಳಿಗಳನ್ನು ಈ ನಾಡಿನ ಪ್ರಮುಖ ಸಂಸ್ಕೃತಿ ಚಿಂತಕರ ವಿಚಾರದ ಬೆಳಕಲ್ಲಿಟ್ಟು ಪರಿಶೀಲಿಸುತ್ತಾರೆ. ತಮ್ಮ ಚಿಂತನೆಗಳನ್ನು ನಿಕಷಕ್ಕೊಡ್ಡಿಕೊಂಡು ಪರಿಶೀಲಿಸುವ ಲೇಖಕರು ಕೆಲವೊಮ್ಮೆ ಬೇರೆ ಚಿಂತಕರ ಹಾಗೂ ವಿಮರ್ಶಕರ ನಿಲುವುಗಳು ಹಿಡಿಯುವ ಅಪಾಯಕಾರಿ ದಾರಿಗಳು ಅಥವಾ ನಿರ್ಧಾರಗಳನ್ನು ಇದಮಿತ್ಥಂ ಎಂದು ಒಪ್ಪಿಕೊಳ್ಳುವುದಿಲ್ಲ. ತನ್ನ ನಿರ್ಧಾರಕ್ಕೆ ಸರಿ ಕಾಣದಿದ್ದಲ್ಲಿ ನಿರಾಕರಿಸುವ ಅಹಂಕಾರವನ್ನು ತೋರದೆ ಸಂಶೋಧನಾರ್ಥಿಯಾದ ವಿದ್ಯಾರ್ಥಿಯೊಬ್ಬ ತೋರುವ ಭಿನ್ನಾಭಿಪ್ರಾಯದ ಹಂತದಲ್ಲಿಯೇ ನಿಲ್ಲಿಸಿ ಸೌಜನ್ಯ ಮೆರೆಯುತ್ತಾರೆ’ ಎಂದು ವಿವರಿಸಿದ್ದಾರೆ.
©2025 Book Brahma Private Limited.