’ಹಸಿರುಶಾಲು ಬಾರುಕೋಲು’ ಲೇಖಕಿ ಸವಿತ ಬಿ.ಸಿ. ಅವರ ಸಂಶೋಧನಾ ಕೃತಿ. ರೈತ ಮುಖಂಡ ಡಾ. ಎಂ.ಡಿ.ನಂಜುಂಡಸ್ವಾಮಿ ಅವರ ಚಿಂತನೆ ಮತ್ತು ಹೋರಾಟದ ವಿಶ್ಲೇಷಣೆಯನ್ನು ಒಳಗೊಂಡಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಿ.ಆರ್. ಗೋವಿಂದರಾಜು, ‘ಎಂ.ಡಿ ನಂಜುಂಡಸ್ವಾಮಿ ಕಾನೂನು, ಅರ್ಥಶಾಸ್ತ್ರಗಳಲ್ಲಿ ವಿರಾಟ್ ಸ್ವರೂಪದ ಅರಿವನ್ನು ಪಡೆದಿದ್ದವರು. ತಮ್ಮ ವ್ಯಾಪಕ ಓದು, ಚಿಂತನೆಗಳಿಂದ ಪಡೆದ ಅರಿವಿನಿಂದಲೇ ’ಬುದ್ದಿಜೀವಿ’ ಎಂಬ ನೆಲೆಯನ್ನು ಕೇಂದ್ರೀಕರಿಸಿಕೊಂಡು ಎಲ್ಲ ಬಗೆಯ ಅವಿವೇಕತನಗಳನ್ನು ಬಯಲು ಮಾಡಿದ್ದರು. ರೈತರ ಬವಣೆಗಳಿಗೆ ತಮ್ಮ ಚಿಂತನೆ, ಚಳವಳಿಗಳ ಮುಖೇನ ಸೆಟೆದು ನಿಲ್ಲುವುದನ್ನು ಕಲಿಸಿದ್ದು ಕಡಿಮೆ ಸಂಗತಿಯೇನಲ್ಲ. ಇಂಥ ಸಂಗತಿಗಳ ಮೂಲಕ ಆತ್ಮಗೌರವದ ಪ್ರತೀಕವಾದ ಕನ್ನಡ ಚಿಂತಕನೊಬ್ಬನ ಬಗೆಗೆ ಅಧ್ಯಯನ, ಸಂಶೋಧನೆಗಳು ನಡೆದದ್ದೇ ಕಡಿಮೆಯಾದರೂ ಈ ಕೃತಿ ಅದನ್ನೆಲ್ಲವನ್ನು ಆವರಿಸಿಕೊಂಡಿದೆ’ ಎಂದು ಪ್ರಶಂಸಿಸಿದ್ದಾರೆ.
ಚಿಂತನೆಗಳು ಗಟ್ಟಿಗೊಂಡು, ಸಂಘಟನೆ ಹೋರಾಟದ ಸ್ವರೂಪ ಪಡೆದ ಸನ್ನಿವೇಶ ಹಾಗೂ ಪ್ರಯೋಗಶೀಲತೆಯು ಹೇಗೆ ಸಾಮೂಹಿಕ ಬಲವನ್ನು ಪಡೆಯಬಲ್ಲದು ಎಂಬುದನ್ನು ಲೇಖಕಿ ವಿಶ್ಲೇಷಿಸಿರುವುದು ಈ ಅಧ್ಯಯನದ ವಿಶೇಷ. ರೈತ ಚಳುವಳಿಯ ಹರಿಕಾರ, ಪರಿಸರವಾದಿ ಪ್ರೊ. ನಂಜುಂಡಸ್ವಾಮಿ ಕರ್ನಾಟಕದ ಚಿರಪರಿಚಿತ ವ್ಯಕ್ತಿತ್ವ. ಇವರ ಪ್ರಸ್ತಾಪವಿಲ್ಲದ ರೈತ ಚಳುವಳಿ ಅಪೂರ್ಣ. ನಂಜುಂಡಸ್ವಾಮಿಯವರ ಚಿಂತನೆಗಳು ರೈತ ಚಳುವಳಿಯನ್ನು ಆವರಿಸಿದೆ. ಹಸಿರು ಸೇನಾನಿ, ವಿಶ್ವ ರೈತ ಚೇತನ ವಿಶೇಷಣಗಳಿಂದ ಗುರುತಿಸಿಕೊಂಡಿದ್ದಾರೆ. ಎಂ.ಡಿ.ನಂಜುಂಡಸ್ವಾಮಿ ಕ್ರಿಯಾಶೀಲ ಹೋರಾಟಗಾರರು ನಾಡಿನ ಪ್ರಸಿದ್ದ ಚಿಂತಕರಾಗಿದ್ದಾರೆ.ಕೃಷ ಸಮುದಾಯದಲ್ಲಿ ಪ್ರಗತಿಪರ ಚಿಂತನೆಗಳನ್ನು ಹುಟ್ಟಹಾಕಿದ ಕೀರ್ತಿ ಇವರದು.ಸರಕಾರಿ ಪ್ರಯೋಜಿತ ದಬ್ಬಾಳಿಕೆ, ಅನ್ಯಾಯಗಳ ವಿರುದ್ದ ಹೋರಾಟಗಳಲ್ಲಿ ಮುಂಚುಣಿಯಲ್ಲಿದ್ದು ರೈತ ಸಮುದಾಯಗಳ ಆಷಾಕಿರಣವಾಗಿದ್ದಾರೆ. ಬೀಜಬಿತ್ತನೆಯ ಸಮಸ್ಯೆ ನುಸಿರೋಗ ನಿಯಂತ್ರಣ, ಕೃಷಿ ಹಾಗೂ ತಂತ್ರಜ್ಞಾನ, ಉದಾರೀಕರಣ, ಜಾಗತೀಕರಣ ಕುರಿತಂತೆ ರೈತರಲ್ಲಿ ಸಷ್ಟ ಅರಿವು ಮೂಡಿಸಿದ್ದಾರೆ. ಈ ಕೃತಿಯಲ್ಲಿ, ನಂಜುಂಡಸ್ವಾಮಿಯವರ ಬದುಕು, ಅವರ ರೈತಪರ ಚಳವಳಿ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗಿದೆ.
©2024 Book Brahma Private Limited.