‘ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು’ ಕೃತಿಯು ತೀ.ನಂ. ಶಂಕರನಾರಾಯಣ ಅವರ ಅಧ್ಯಯನ ಕೃತಿಯಾಗಿದೆ. ಮೊದಲನೇ ಅಧ್ಯಾಯನದಲ್ಲಿ ಬುಡಕಟ್ಟಿನ ಲಕ್ಷ್ಮಣ ಮತ್ತು ಸ್ವರೂಪದ ಕುರಿತು ಲೇಖಕರು ವಿವರಿಸಿದ್ದಾರೆ. ಬುಡಕಟ್ಟಿನ ಲಕ್ಷಣ ಮತ್ತು ಸ್ವರೂಪ: ಸಂಪ್ರದಾಯ ಮತ್ತು ನಂಬಿಕೆಗಳ ಅಧ್ಯಯನ ಸಂಸ್ಕೃತಿ ಅಧ್ಯಯನದ ಒಂದು ಭಾಗವಾಗಿ ಬರುವುದರಿಂದಲೂ ಬುಡಕಟ್ಟುಗಳ ಅಧ್ಯಯನ ಸಂಸ್ಕೃತಿಯ ಅಧ್ಯಯನದಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುವುದರಿಂದಲೂ ಪ್ರಸ್ತುತ ಅಧ್ಯಯನದಲ್ಲಿ ಸಂಸ್ಕೃತಿಗೆ ಸಂಬಂಧಿಸಿದಂತೆ ಕೆಲವು ಮುಖ್ಯವಾದ ಅಂಶಗಳನ್ನು ಗುರುತಿಸಬಹುದು. ಸಮಾಜದ ಒಬ್ಬ ಜೀವಿಯಾಗಿ ಮಾನವ ಪರಂಪರಾನುಗತವಾಗಿ ರೂಢಿಸಿಕೊಂಡು ಬಂದಿರುವ, ವರ್ಗಾಯಿಸುವ, ಹಂಚಿಕೊಳ್ಳುವ ಮತ್ತು ಗೌರವಿಸುವ ಕ್ರಿಯೆಗಳ, ಆಲೋಚನೆಗಳ, ಮೌಲ್ಯಗಳ ಮತ್ತು ನಿರ್ಮಾಣ ಮಾಡುವ ವಸ್ತುಗಳ ಮೊತ್ತವನ್ನು ಸಂಸ್ಕೃತಿಯೆಂದು ಕರೆಯಬಹುದು.
ಸಂಸ್ಕೃತಿ ಮಾನವನಿಗೆ ವಿಶಿಷ್ಟವಾದದ್ದು. ಪ್ರಾಣಿಗಳಿಗಿಂತ ವಿಭಿನ್ನವಾದ ರೀತಿಯಲ್ಲಿ ಮಾನವ ತನ್ನ ಅಗತ್ಯಗಳನ್ನು ಈಡೇರಿಸಿಕೊಳ್ಳುವಾಗ ಸ್ವಾರ್ಥ ಮತ್ತು ಸಮಾಜದ ಹಿತರಕ್ಷಣೆ ಇವೆರಡರ ನಡುವಣ ಸಂಘರ್ಷಕ್ಕೆ ಒಳಗಾಗುತ್ತಾನೆ. ಸಂಸ್ಕೃತಿಯ ಪ್ರಭಾವದಿಂದ ಸಮಾಜದ ಹಿತಕ್ಕಾಗಿ ಸ್ವಾರ್ಥವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಭದ್ರತೆ, ರಕ್ಷಣೆ, ಸುಖ, ಸಂತೋಷಗಳು ಲಭ್ಯವಾಗುತ್ತವೆ. ಮಾನವ ಪ್ರಯತ್ನಪೂರ್ವಕವಾಗಿ ರೂಪಿಸಿಕೊಳ್ಳುವ ಸಂಸ್ಕೃತಿ ಅವನ ದೇಹಕ್ಕೆ ಮತ್ತು ಆತ್ಮಕ್ಕೆ ಬೇಕಾಗುವ ಅಗತ್ಯಗಳನ್ನು ಪೂರೈಸುತ್ತದೆ. ಸಂಸ್ಕೃತಿಯ ಸಹಾಯದಿಂದ ಮಾನವನು ಪ್ರಕೃತಿಯ ಸಂಪನ್ಮೂಲಗಳನ್ನು ಮಾತ್ರವಲ್ಲದೆ ತನ್ನಲ್ಲಿಯೇ ಇರುವ ಪ್ರಚ್ಛನ್ನ ಶಕ್ತಿಗಳನ್ನು ಬಳಸಿಕೊಂಡು ಮುಂದುವರಿಯಲು ಸಾಧ್ಯವಾಗಿದೆ.
©2024 Book Brahma Private Limited.