‘ಇಂಗ್ಲಿಷ್ ಗೀತಗಳು ಎಂಬ ಶ್ರೀ ಸಾಹಿತ್ಯ’ ಈ ಕೃತಿಯನ್ನು ಲೇಖಕ ರವಿಶಂಕರ ಎ.ಕೆ. (ಅಂಕುರ) ಸಂಪಾದಿಸಿದ್ದಾರೆ. ‘ಇಂಗ್ಲೀಷ್ ಗೀತೆಗಳು ’ ಮೂರು ಹಂತದಲ್ಲಿ ಪ್ರಕಟಗೊಂಡ ಕೃತಿ. ಈ ಕೃತಿಗೆ ಒಂದು ಶತಮಾನದ ಅಧ್ಯಯನ ಗೌರವ ದೊರಕಿದೆ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಓದುವ ವಿಶ್ವದ ಎಲ್ಲರೂ ‘ಜೀವನ ಪ್ರೀತಿ’ ಮಾಲಿಕೆಯಡಿ ಅಧ್ಯಯನ ನಡೆಸಿದ ಫಲವೇ ಈ ಕೃತಿ.
‘ಇಂಗ್ಲಿಷ್ ಗೀತಗಳು’ ಕೃತಿಯ ಜೊತೆಗೆ ಶ್ರೀ ಅವರ ಇತರ ಸಾಹಿತ್ಯವನ್ನು ತಮ್ಮ ತಮ್ಮ ಅಭಿರುಚಿಯಂತೆ ಆಯ್ಕೆಮಾಡಿಕೊಂಡು ಅಧ್ಯಯನ ಮಾಡಲಾಗಿದೆ. ಈ ಕೃತಿಯನ್ನು ಮೂರು ವಿಷಯಗಳ ಆಧಾರವಾಗಿ ಸಂಪಾದಿಸಲಾಗಿದೆ. ಮೊದಲ ಏಳು ಲೇಖನಗಳಲ್ಲಿ ‘ಇಂಗ್ಲಿಷ್ ಗೀತಗಳು’ ಕೃತಿಯ ಸ್ವರೂಪವನ್ನು ಕುರಿತು ಅದರ ಭಾಷೆ, ಭಾಷಾಂತರ ಕ್ರಮ ಹಾಗೂ ತಾತ್ವಿಕತೆಯನ್ನು ಕುರಿತು ಅಧ್ಯಯನ ಕಂಡುಬರುತ್ತದೆ. ಇದರ ಜೊತೆಗೆ ನಂತರದ ಆರು ಲೇಖನಗಳು ಇಂಗ್ಲಿಷ್ ಗೀತಗಳು ಕೃತಿಯಲ್ಲಿನ ಕೆಲವು ಕವಿತೆಗಳ ವಿಶಿಷ್ಟ ಅಧ್ಯಯನ, ಸಂಶೋಧನೆಯನ್ನು ಪ್ರಕಟಿಸುತ್ತವೆ. ಎರಡನೆಯ ಭಾಗದಲ್ಲಿ ಎರಡು ಲೇಖನಗಳು ಶ್ರೀ ಅವರ ಇತರ ಸಾಹಿತ್ಯ ಅಂದರೆ ‘ಅಶ್ವತ್ಥಾಮನ್’ ನಾಟಕ ಕುರಿತ ಅಧ್ಯಯನಗಳಾಗಿವೆ. ಮೂರನೆಯ ಭಾಗವಾಗಿ ಉಳಿದ ಆರು ಲೇಖನಗಳು ‘ಶ್ರೀ’ ಅವರ ವ್ಯಕ್ತಿತ್ವ, ಪ್ರತಿಭೆ, ಸಾಹಿತ್ಯ ರಚನಾಶಕ್ತಿ ಮೊದಲಾದ ತಾತ್ವಿಕತೆಯನ್ನು ಅತ್ಯಂತ ಗಂಭೀರವಾಗಿ ಅಧ್ಯಯನ ನಡೆಸಿ ಹೊಸ ಸಂಶೋಧನೆ ನೀಡಿದ್ದಾರೆ.
ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಮೂರರಿಂದ ನಾಲ್ಕು ತಿಂಗಳು ಅರ್ಥಪೂರ್ಣ ಶ್ರಮವಹಿಸಿ ಉತ್ತಮ ಲೇಖನ ರಚಿಸಿದ್ದಾರೆ. ಇವರ ಶ್ರಮದ ಫಲವೇ ಈ ಇಂಗ್ಲೀಷ್ ಗೀತಗಳು ಎಂಬ ಶ್ರೀ ಸಾಹಿತ್ಯ ಕೃತಿ.
ಆಧುನಿಕ ಕನ್ನಡ ಸಾಹಿತ್ಯದ ಪ್ರವೇಶವು ಅತ್ಯಂತ ಗಂಭೀರವಾಗಿ ಮೂಡಿಬಂದಿದೆ. ಒಂದು ಶತಮಾನಗಳ ಇತಿಹಾಸದೊಳಗೆ ಆ ಗಂಭೀರತೆಯನ್ನು ನಾವು ಯಾವ ರೂಪದಲ್ಲಿ ಮುಂದುವರೆಸುತ್ತಿದ್ದೇವೆ ಎಂಬುದೇ ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಪ್ರಭಾವ ಹಾಗೂ ಪ್ರೇರಣೆಯ ಫಲವಾಗಿ ಕನ್ನಡ ಸಾಹಿತ್ಯವನ್ನು ರೂಪಿಸುವ ಕಾರ್ಯದಲ್ಲಿ ದುಡಿದ ಮಹನೀಯರು ಮೂಲಕ್ಕೆ ಪಕ್ಷಾತೀತವಾದ ಶುದ್ಧತೆಯನ್ನು ರೂಪಿಸಿದ್ದಾರೆ. ನಾಡು-ನುಡಿಗಳ ಸಾಂಸ್ಕೃತಿಕ ಪರಿಸ್ಥಿತಿಯು ಮರೆಯಾಗುತ್ತಿದೆ ಎನಿಸಿದಾಗ ಉಳಿಸಲು, ಬೆಳವಣಿಗೆ ಮಾಡಲು ತನ್ನ ಜೀವನಗಳನ್ನೇ ಅರ್ಪಿಸಿದ್ದಾರೆ. ಆದರೆ ಈ ಉಳಿವಿನ ಪ್ರಶ್ನೆ ಇಂದಿಗೂ ದಾರಿ ತಪ್ಪಿದ ಏಕಾಂತ ದ್ವೀಪವಾಗಿ ತನ್ನ ಪಥವನ್ನು ಬದಲಿಸಿದೆ. ಹೋರಾಟದ ದಾರಿಯ ಮೂಲಕ ತೋರಿಕೆಯಾದರೆ, ವ್ಯಾಪಾರೀಕರಣದ ಈ ವಿಶ್ವಮಾನವ ಲಾಭದ ಬೇರುಗಳನ್ನು ಪ್ರೀತಿಯಿಂದ ಬೆಳೆಸುತ್ತಿದ್ದಾನೆ. ಮರೆಯಲಾಗದ ಮಹನೀಯರ ಕಾರ್ಯವನ್ನು ಯಾವ ಪರಿಧಿಯಲ್ಲಿ ಅಳತೆ ಮಾಡುವುದು ಎನಿಸುತ್ತಿದೆ. ಈ ದೃಷ್ಟಿಯಿಂದ ಸಹೃದಯತೆಯ ಓದುವಿನಲ್ಲಿ ಅಧ್ಯಯನಮಾಡುವುದು. ಜೊತೆಯಾಗುವ ಆಸಕ್ತರನ್ನು ಅಧ್ಯಯನಮಾಡಿಸುವುದು ನಮ್ಮ ಮುಂದಿರುವ ಜವಾಬ್ದಾರಿಯಾಗಿದೆ.
©2025 Book Brahma Private Limited.