ಅಕ್ಷರಗಳು ಉಳಿಯುತ್ತಿವೆ. ಉಳಿಯುವ ಒಳಿತಿನಲ್ಲೇ ಯಂತ್ರ ನಾಗರೀಕತೆಯು ತನ್ನ ಹೊಸ ಅನ್ವೇಷಣೆಗಳಿಗೆ ಅಕ್ಷರಗಳನ್ನೂ ತುಂಬುತ್ತಿದೆ. ಬಾಹ್ಯ ಜಗತ್ತು ತೆರೆದಷ್ಟೂ ಉಳಿಕೆ ಸಾಧ್ಯವಾಗಬಹುದು. ಅಕ್ಷರಗಳ ಗಳಿಕೆ ಅಳಿಯುತ್ತಿದೆ. ಅಳಿಯುವ ಎಲ್ಲಾ ನೆಪಗಳಲ್ಲೂ ನೆನಪು ದಾಖಲೆಯ ಬೆನ್ನೇರಿ, ತನ್ನ ಸ್ಮರಣೆಗಳನ್ನು ಕಳಚಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಅಕ್ಷರಗಳ ಅಪಾರ ನೆನಪಿನ ಓದುವಿಕೆಯನ್ನು ನಾವು ಮರುಸೃಷ್ಟಿಸಿಕೊಳ್ಳಬೇಕಿದೆ. ಆಲೋಚನೆಗೆ ಒಳಪಡದ ಯಾವುದೇ ಬರಹವು ಸಾಹಿತ್ಯವಾಗದೆ, ಬರಿ ಸುದ್ದಿಯಾಗುತ್ತದೆ. ಆಲೋಚಿಸುವ ಬರಹವು ನಮಗೆ ಅಗತ್ಯವಿದೆ. ಸಹೃದಯರನ್ನು ಕುರಿತು ಭಾರತೀಯ ಕಾವ್ಯಮೀಮಾಂಸೆಯಲ್ಲಿಯೇ ಉಲ್ಲೇಖಿಸಲಾಗಿದೆ. ಆನಂದವರ್ಧನನು ಧ್ವನ್ಯಾಲೋಕದಲ್ಲಿ ರಸಜ್ಞತಾ ಏವ ಸಹೃದಯತ್ವಂ ಎಂದಿದ್ದಾನೆ. ಅಭಿನವಗುಪ್ತನು ಹೃದಯ ಸಂವಾದಭಾಜಃ ಸಹೃದಯಾ(ಧ್ವನ್ಯಾಲೋಕ ಲೋಚನ) ವೆಂದಿದ್ದಾನೆ. ರಾಜಶೇಖರನ ಭಾವಯತ್ರಿ ಪ್ರತಿಭೆಯಲ್ಲಿ ಸಹೃದಯನ ಚಿಂತನೆ ಅಡಗಿದೆ. ವಚನಕಾರರೆಲ್ಲರೂ ಶರಣ ತತ್ವವನ್ನು ಕನಸುಕಂಡಿದ್ದೂ, ಹರಿಹರ ಜನಭಾಷೆಗಾಗಿ ಬರೆದದ್ದೂ, ಕೀರ್ತನಾಕಾರರು ಹಾಡಿದ್ದು, ಕುಮಾರವ್ಯಾಸನು ಭಾರತವನ್ನು ಪಾರಾಯಣಮಾಡಿದ್ದು ಈ ಸಹೃದಯತೆಗಾಗಿಯೇ, ಸಹೃದಯರಿಗಾಗಿಯೇ ಎಂದು ಗ್ರಹಿಸಬಹುದು. ಬೇಂದ್ರೆ, ಕುವೆಂಪು ಮೊದಲಾದ ಕವಿಗಳು ತಮ್ಮ ಕಾವ್ಯವನ್ನು ಮೊದಲಿಗೆ ಸಹೃದಯ ವಿಮರ್ಶೆಗೆ ಅರ್ಪಿಸಿದರು. ಈ ಸಹೃದಯ ಯಾರು? ಎಂಬ ಪ್ರಶ್ನೆಗೆ ಸರಳ ಉತ್ತರವೆಂದರೆ ಅರ್ಥಪೂರ್ಣವಾಗಿ ಓದುವ, ಗ್ರಹಿಸಿಕೊಳ್ಳುವ ಸರ್ವರೂ ಸಹೃದಯರೇ ಆಗಿದ್ದಾರೆ. ಈ ಸಹೃದಯ ಓದುವಿನ ಕಾರ್ಯವನ್ನು ಈ ಕೃತಿಯಲ್ಲಿ ನಡೆಸಿದ್ದೇನೆ. ಆಧುನಿಕ ಕನ್ನಡ ಸಾಹಿತ್ಯದ ಹೊಸ ಓದುವಿನ ಪ್ರಯಾಣ ನಮ್ಮದು. ಇಲ್ಲಿನ ಹಲವು ಓದುಗಳು ನಮ್ಮ ಆಪ್ತ ಓದುವಿನ ಕನಸುಗಳೇ ಆಗಿವೆ. ಓದುವಿನ ಹಂಚಿಕೆಯಲ್ಲಿ ನಾವು ಸದಾ ಆಪ್ತವಾಗಿ ಪ್ರಯಾಣ ಮಾಡುತ್ತೇವೆ. ಚಿಂತನೆಗಳು ಪರಸ್ಪರ ಬರಹಗಳಲ್ಲಿ ಕಳೆದುಹೋಗಿ ಮರುಜನ್ಮ ಪಡೆಯುತ್ತವೆ. ಈ ಕೃತಿಯ ಓದುವಿನಲ್ಲಿ ಇಲ್ಲಿನ ಬರಹ ನಿಮ್ಮದೇ ಆಗಿರುತ್ತದೆ. ನೆಮ್ಮದಿಯಾಗಿ ಓದಬಹುದು.
‘ಭಾಷಾ ಚಿಂತನೆ’ ಎಂಬುದು ಸಾರ್ವಕಾಲಿಕವಾದ ಜಿಜ್ಞಾಸೆ. ಗ್ರಾಮ್ಯ ಜಗತ್ತಿನಲ್ಲಿ ನಿತ್ಯ ವ್ಯವಹರಿಸುವವರಿಗೆ ಅದೆಂದೂ ಸಮಸ್ಯೆಯಲ್ಲ. ಬದುಕು ಸಾಗಲು ಯಾವ ಭಾಷೆಯ ಪ್ರಯೋಗ ಅನುಕೂಲವೋ ಅಂತಹ ಭಾಷೆಯನ್ನು ಮುಕ್ತವಾಗಿ ಬಳಸುತ್ತಾರೆ. ಭಾಷೆಯ ಕುರಿತು ಅಭಿಮಾನವಾಗಲಿ, ಕೀಳರಿಮೆಯಾಗಲಿ ಅವರಲ್ಲಿ ಮೂಡುವುದಿಲ್ಲ. ತಾನು ನಿತ್ಯ ಮಾತನಾಡುವ ಸ್ವಚ್ಛಭಾಷೆಯನ್ನು ಮಾತನಾಡುವ ಮನುಷ್ಯರನ್ನು ತಮ್ಮವರೆಂದು ಭಾವಿಸುತ್ತಾರೆ. ಇಲ್ಲಿ ಭಾಷೆಯ ಅವನತಿ ಹಾಗೂ ಪ್ರಭಾವದ ಅರಿವಿಲ್ಲದೆ ಹಲವು ಭಾಷೆಗಳನ್ನು ಅಥವಾ ಒಂದು ಭಾಷೆಯ ವಿಸ್ತಾರತೆ(ಪ್ರಾಯೋಗಿಕ ವ್ಯಾಪ್ತಿ)ಯನ್ನು ಕಳೆದುಕೊಳ್ಳಲಾಗಿದೆ. ಅಧ್ಯಯನ ಹಾಗೂ ಚಿಂತನೆಗಳ ಮೂಲಕ ವಿದ್ಯಾವಂತರು ಭಾಷೆಯ ಕುರಿತು ಮೊದಲಿಂದಲೂ ಆಲೋಚಿಸುತ್ತಾ ಬಂದಿದ್ದಾರೆ. ಪ್ರಪಂಚದ ಭಾಷಾ ಪ್ರಭಾವವನ್ನು ಭಾವನೆಗಳ ವಿಸ್ತಾರಕ್ಕಾಗಿ ತರುವುದು ಹಾಗೂ ನಮ್ಮ ಭಾಷೆಯನ್ನು ವಿಸ್ತರಿಸುವ ಕಾರ್ಯವನ್ನು ಮೊದಲಿಂದ ಮಾಡುತ್ತಾ ಬಂದಿದ್ದಾರೆ. ಧರ್ಮ ಪ್ರಚಾರಕ್ಕಾಗಿ ಬಂದ ಪಾದ್ರಿಗಳು(ಇಂದಿನ ಪ್ರವಾಸಿಗಳು ಕೂಡ) ‘ಸ್ಥಳೀಯ’ ಅಧ್ಯಯನಕ್ಕಾಗಿ ಒಂದು ಪ್ರದೇಶದ ಭಾಷೆಯನ್ನು ಕಲಿತರು. ತಮ್ಮ ವ್ಯವಹಾರದ ಹಾಗೂ ಧರ್ಮ, ಪ್ರಾದೇಶಿಕ ಭಾವ ಜಗತ್ತಿನ ಪ್ರಚಾರಕ್ಕಾಗಿ ಅವರ ಭಾಷೆಯನ್ನು ಪರಿಚಯಿಸಿದರು. ಇದರಿಂದ ಅನುಕೂಲವೂ ಹಾಗೂ ನಮ್ಮ ಸಂಸ್ಕೃತಿಗಳ ‘ಸಂಕರ’ ಕ್ರಿಯೆಯೂ ಸುಲಭವಾಗಿ ಸಾಗಿತು. ಈ ವಿಚಾರದ ತಿರುಳೆಂದರೆ ಒಂದು ಭಾಷೆಯ ಪಲ್ಲಟವು ಹಲವು ಭಾಷೆಗಳ ಪ್ರಭಾವ ಹಾಗೂ ಪ್ರಯೋಗದ ‘ಜ್ಞಾನಮೀಮಾಂಸೆ’ಯಿಂದ ಜರುಗುತ್ತದೆ. ಕಾಲದ ಮಿತಿಯಿಲ್ಲದೆ ಯಾವುದೇ ಪರಿಸರದಲ್ಲಿ ಎಲ್ಲರಿಂದಲೂ ಸಾಗುವ ಕ್ರಿಯೆ. ಭಾಷೆಯೆಂಬುದು ಹರಿವ ನೀರು. ಹೊಸ ನೀರಿನ ಸೇರ್ಪಡೆಯೂ, ಕೆರೆ, ಕಟ್ಟೆಗಳ ನಿಲ್ಲುವ ವ್ಯಾಪ್ತಿ ಸೀಮಿತತೆಯೂ ಯಾವುದೇ ಭಾಷೆಯ ಮೇಲೆ ಅದರ ಪ್ರಯೋಗ ಪಶುಗಳು ನಡೆಸುವ ಬೌದ್ಧಿಕ ಕಸರತ್ತು. ಇಪ್ಪತ್ತನೇ ಶತಮಾನದ ಆರಂಭವು ‘ಬೌದ್ಧಿಕ ಬದಲಾವಣೆ’ಯ ಶತಮಾನವಾಗಿ ಪ್ರಾರಂಭವಾಯಿತು. ಅಲ್ಲಿಯ ತನಕ ಪ್ರಭಾವಿಸಿದ ಭಾಷಾ ಪ್ರಭಾವವು ಮತಾಂತರ-ಅಧಿಕಾರ-ಅಧ್ಯಯನ ಈ ಹಿನ್ನಲೆಯಲ್ಲಿಯೇ ಸ್ವರೂಪಗೊಂಡಿತು. ಈ ದಿಸೆಯಲ್ಲಿಯೇ ಪತ್ರಿಕೆಗಳ ಜೊತೆಗೆ ಸಂಪಾದನಾ ಕಾರ್ಯವು ನಡೆಯುತ್ತಿರುವ ಹಿಂದೆ ಸಾಂಸ್ಕೃತಿಕವಾದ ರಾಜಕಾರಣವಿದ್ದರೂ ಯಾವುದೇ ತಿಳಿಯದೇ ವಿದ್ಯೆ ಪಡೆದ ದೇಸೀಯ ವಿದ್ವಾಂಸರು ವಿದೇಶಿ ಪಾದ್ರಿಗಳ ಜೊತೆಯಲ್ಲಿ ಕೆಲಸ ನಿರ್ವಹಿಸಿದರು. ಇದರ ಫಲವಾಗಿ ಆಯಾ ಪ್ರಾದೇಶಿಕ ಸಾಹಿತ್ಯ ಸಂಪತ್ತಿನ ಹುಡುಕಾಟ ಹಾಗೂ ಮಹತ್ವ ತಿಳಿಯಲು ಪ್ರಾರಂಭವಾಯಿತು. ಮೊದಲಿಗೆ ವ್ಯಾಕರಣ ಕೃತಿಗಳು, ಶಬ್ದಕೋಶಗಳು, ಸಂಸ್ಕೃತ ಮತ್ತು ಕನ್ನಡದ ಹಿಂದಿನ ಕೃತಿಗಳನ್ನು ಸಂಪಾದಿಸುವ ಕಾರ್ಯ ಪ್ರಾರಂಭವಾಯಿತು. ಈ ವಾತಾವರಣದಲ್ಲಿ ಚರ್ಚ್ಗಳ ಮೂಲಕ ಪ್ರಾರಂಭವಾದ ಇಂಗ್ಲಿಷ್ ಶಿಕ್ಷಣವು ಸಮಾಜದ ಎಲ್ಲರಿಗೂ ಅವಕಾಶ ಒದಗಿಸಿದಲ್ಲದೇ ಸಮಾಜದ ಹೊಸ ಪಲ್ಲಟಕ್ಕೆ, ಸ್ಥಿತ್ಯಂತರದ ಮಹಾಯುದ್ಧಕ್ಕೆ ಕಾರಣವಾಯಿತು. ಸಮಾಜವು ಇಂಗ್ಲಿಷರನ್ನು ವಿರೋಧಿಸುವ ಜೊತೆಗೆ ಭಾರತ ಬಿಟ್ಟು ತೊಲಗಿಸುವ ಹೋರಾಟಗಳು ಪ್ರಾರಂಭವಾದವು. ರಾಜಕೀಯ ಹಾಗೂ ಸಾಮಾಜಿಕವಾದ ಎರಡು ಮಾದರಿಯ ವಿಭಿನ್ನ ಪಲ್ಲಟಗಳು ಸಮಾಜದಲ್ಲಿ ತಲೆದೋರಿದವು. ಈ ಪಲ್ಲಟಗಳಲ್ಲಿ ಸಾಹಿತ್ಯಿಕವಾಗಿ ನಡೆದ ಪಲ್ಲಟವನ್ನು ಆಲೋಚಿಸಿದರೆ ಸಮಾಜದ ಮುಖ್ಯವಾಹಿನಿಯಲ್ಲಿದ್ದವರು ಮಾತ್ರ ಶಿಕ್ಷಣ ಕ್ಷೇತ್ರಕ್ಕೆ ಹೆಜ್ಜೆ ಹಾಕಿದರು. ಮದ್ರಾಸ್ ಉನ್ನತ ಶಿಕ್ಷಣ ಕೇಂದ್ರವಾಗಿತ್ತು. ಈ ದೃಷ್ಟಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಉಂಟಾದ ಇಪ್ಪತ್ತನೇ ಶತಮಾನದ ಮೊದಲ ಪಲ್ಲಟಗಳನ್ನು ಗಮನಿಸಬಹುದು.
©2024 Book Brahma Private Limited.