‘ಐನೆಲೆ ಕರಿಬಸವಾರ್ಯರ ಜೀವನ ಮತ್ತು ಸಾಹಿತ್ಯ: ಒಂದು ಅಧ್ಯಯನ’ ಲೇಖಕ ಡಾ. ಕೊಡಂಬಲ್ ಈಶ್ವರಯ್ಯ ಅವರ ಕೃತಿ. ಹೈದರಾಬಾದ್ ಕರ್ನಾಟಕ ಪ್ರದೇಶವು ಚಂಪೂ, ವಚನ, ಕೀರ್ತನೆ, ತತ್ವಪದ ಸಾಹಿತ್ಯಗಳ ಮೂಲಕ ಕೊಡುಗೆಯನ್ನು ನೀಡಿದೆ. ಅದೇ ಬಗೆಯಲ್ಲಿ ಹದಿನೆಂಟನೆಯ ಶತಮಾನದಲ್ಲಿ ಎಲೆ ಮರೆಯ ಕಾಯಿಯಂತಿದ್ದ ಐನೆಲೆ ಕರಿಬಸವಾರ್ಯರ ಕಾಣಿಕೆ ಸ್ಮರಣೀಯವಾದುದು.
ಅವರು ಸ್ವರ ವಚನ, ಸ್ತೋತ್ರ, ಅಷ್ಟಕ, ಟೀಕಾ ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಸಂಪನ್ನಗೊಳಿಸಿದ್ದಾರೆ. ಆದಾಗ್ಯೂ ಅವರ ಹೆಸರು ಇಂದಿಗೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗದೇ ಇರುವುದು ಒಂದು ದೊಡ್ಡ ಕೊರತೆಯೇ ಸರಿ. ಈ ಕೊರತೆಯನ್ನು ತುಂಬಿಕೊಡುವ ಹಿನ್ನೆಲೆಯಲ್ಲಿ ಕೊಡಂಬಲ್ ಈಶ್ವರಯ್ಯ ಅವರು ಪ್ರಸ್ತುತ ಕವಿಯ ಜೀವನ ಮತ್ತು ಸಾಹಿತ್ಯ ಕುರಿತು ಅಧ್ಯಯನ ಕೈಗೊಂಡು ಈ ಕೃತಿಯನ್ನು ರಚಿಸಿದ್ದಾರೆ.
ಕವಿಯ ವೈಯಕ್ತಿಕ ಸಂಗತಿಗಳೊಂದಿಗೆ ಸಮಗ್ರ ಸಾಹಿತ್ಯ ಕೃತಿಗಳನ್ನು ಕುರಿತು ಅಧ್ಯಯನ ಕೈಗೊಂಡು ಸಾಹಿತ್ಯ ಚರಿತ್ರೆಗೆ ಮಹತ್ವದ ದಾಖಲೆ ಸೇರುವಂತೆ ಮಾಡಿರುವದು ಸ್ತುತ್ಯಾರ್ಹ ಸಂಗತಿ. ಕವಿಯ ಸಮಗ್ರ ಕೃತಿಗಳ ವಸ್ತು, ಭಾಷೆ ಶೈಲಿ ಹಾಗೂ ವೈಶಿಷ್ಟ್ಯಗಳನ್ನು ಅರ್ಥಪೂರ್ಣವಾಗಿ ಗುರುತಿಸಿದ್ದಾರೆ. ಅವರ 'ಶ್ರೀ ಕುಮಾರ ವಿಜಯ ವಿಳಾಸಂ' ಮಹಾಕಾವ್ಯ ಷಟ್ಟದಿ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯಾಗಿರುವುದನ್ನು ಆಧಾರಗಳೊಂದಿಗೆ ವಿಶ್ಲೇಷಿಸಿರುವುದು ವೈಶಿಷ್ಟಪೂರ್ಣವಾಗಿದೆ.
ಕರಿ ಬಸವಾರ್ಯರ ವಚನಗಳಲ್ಲಿ ವ್ಯಕ್ತವಾಗಿರುವ ಆತ್ಮವಿಡಂಬನೆ, ಸತಿ-ಪತಿ ಭಾವದ ಭಕ್ತಿ ಬೆಡಗುಗಳೊಂದಿಗೆ ಭಾಷಾಸ್ವರೂಪವನ್ನು ಕುರಿತು ಚರ್ಚಿಸಿರುವುದು ಮಹತ್ವದ ಸಂಗತಿಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಎಲೆಮರೆಯ ಮಹಾಕವಿಯನ್ನು ಕುರಿತು ಮಹತ್ವದ ಸಂಶೋಧನಾಧ್ಯಯನ ಮಾಡಿರುವ ಕೊಡಂಬಲ್ ಈಶ್ವರಯ್ಯ ಅವರ ಈ ಕೃತಿ ಅಧ್ಯಯನಶೀಲರಿಗೆ ಮಾದರಿಯಾಗುತ್ತದೆ.
©2024 Book Brahma Private Limited.