ಲೇಖಕ ಟಿ. ನಾಗರಾಜು ಅವರ ಲೇಖನ ಕೃತಿ `ಸವಿನೆನಪುಗಳು ಭಾಗ-2’. ಪುಸ್ತಕವು ಲೇಖಕನ ಸಂಗೀತ ಅನುಭವಗಳ, ಖ್ಯಾತ ಸಂಗೀತ ಕಲಾವಿದರೊಂದಿಗಿನ ಒಡನಾಟಗಳ ಕುರಿತಾದ ಲೇಖನಗಳನ್ನು ಒಳಗೊಂಡಿದೆ. ಪುಸ್ತಕದ ಮುನ್ನುಡಿಯಲ್ಲಿ ಸಿ.ಆರ್. ಹಿಮಾಂಶು ಅವರು, “ಟಿ. ನಾಗರಾಜು ಅವರು ನಿಕಟ ಸಂಪರ್ಕವನ್ನು ಹೊಂದಿದ್ದ ಕಲಾವಿದರ ಬಗ್ಗೆ ಮಾತನಾಡಲು ತೊಡಗಿದರೆ ಗಡಿಯಾರದ ಮುಳ್ಳು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತದೆ. ಮದುರೈ ಸೋಮು, ಫೈಟ್ ಮಾಲಿ ಮುಂತಾದವರಿಗೆ ತುಂಬಾ ಆತ್ಮೀಯರಾಗಿದ್ದ ನಾಗರಾಜುರವರಿಗೆ ಕಲಾವಿದರ ಒಳತೋಟಿಗಳ ಪರಿಚಯವಿದೆ. ಅವರೊಂದಿಗಿನ ಸಂಭಾಷಣೆಯಲ್ಲಿ ನಾಗರಾಜುರವರು ಕಲಾವಿದರ ಜಗತ್ತನ್ನು ತುಂಬಾ ವರ್ಣಮಯವಾಗಿ ಕಟ್ಟಿಕೊಡುತ್ತಾರೆ. ಆದರೆ ಬರಹ ರೂಪದಲ್ಲಿ ತಮ್ಮೆಲ್ಲ ಅನುಭವಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಚರ್ಚೆಗೆ ಗ್ರಾಸವಾಗಬಲ್ಲಂಥ ವಿಷಯಗಳನ್ನೂ, ತಮ್ಮ ಕಹಿ ಅನುಭವಗಳನ್ನೂ ಅವರು ಓದುಗರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಬಯಸುವುದಿಲ್ಲ. ಮೇಲಾಗಿ, ಅವರೆಂದೂ ಬರಹಗಾರರಾಗಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಿದವರಲ್ಲ. ಈ ಮಿತಿಗಳ ಹೊರತಾಗಿಯೂ ಅವರ ಅನುಭವಗಳು ಓದುಗರಿಗೆ ಪರಿಚಯವಿಲ್ಲದ ಜಗತ್ತೊಂದಕ್ಕೆ ಬೆಳಕಿಂಡಿಯಾಗುತ್ತವೆ. ದುರದೃಷ್ಟವಶಾತ್, ಇಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನಾಗರಜುರವರಂಥ ಕಲಾರಸಿಕ ಆಯೋಜಕರ (ಸ್ವತಃ ವೃತ್ತಿಪರ ಕಲಾವಿದರಲ್ಲದವರ) ಸಂಖ್ಯೆ ಕ್ಷೀಣಿಸುತ್ತಿದ್ದು ಕಲಾವಿದರೇ ಕಲಾ ಸಂಘಟಕರೂ ಆಗಬೇಕಾದಂಥ ಪರಿಸ್ಥಿತಿಯಿದೆ. ಸಂಗೀತವನ್ನು ಉತ್ಕಟವಾಗಿ ಪ್ರೀತಿಸುವ ಕಲಾರಸಿಕರು ಈ ಪುಸ್ತಕದಲ್ಲಿ ನಾಗರಾಜುರವರಂಥ ಆಯೋಜಕರಿಗೆ ಮಾತ್ರವೇ ದಕ್ಕಬಹುದಾದಂಥ ಅಮೂಲ್ಯವಾದ ಅನುಭವಗಳನ್ನು ಗಮನಿಸಬೇಕು” ಎಂದು ಹೇಳಿದ್ದಾರೆ.
©2025 Book Brahma Private Limited.