ನಮಗೆ ಬುದ್ಧಿಯ ವಿಕಾಸದ ಮೊದಲ ಹಂತದಲ್ಲಿಯೇ ವಿಮರ್ಶೆ ನಮ್ಮ ಜೊತೆಯಾಗುತ್ತದೆ. ಇದು ಸರಿ, ತಪ್ಪುಗಳ ಅವಲೋಕನೆಯೊಂದಿಗೆ ಜಗತ್ತಿನ ಎಲ್ಲಾ ತಿಳಿವಳಿಕೆಗಳ ಕುರಿತು ಶುಚಿಕಾರ್ಯ ಪ್ರಾರಂಭಿಸುತ್ತೇವೆ. ಈ ಶುಚಿ ಎಂದರೇನು? ಎಂಬ ಕುತೂಹಲವು ಕನ್ನಡ ಸಾಹಿತ್ಯದಲ್ಲಿ ಇನ್ನೂ ಆಳವಾದ ಬೇರಿನೊಂದಿಗೆ ಗ್ರಹಿಕೆಗೆ ಸಿಕ್ಕಿಲ್ಲ. ಮೇಲ್ಪದರದ ಕೆಸರು ನೀರಿನಲ್ಲಿ ಪುಷ್ಟಿಹೊಂದಿರುವ ಸಾಹಿತ್ಯ ಸಮೃದ್ಧಿಯು ಮತ್ತೆ ಪಂಪನೋ, ವಚನಗಳೋ, ಹರಿಹರನೋ, ಕುಮಾರವ್ಯಾಸನನ್ನೋ ಸೃಷ್ಟಿಸದ ಅಲ್ಪಾವಧಿಗೆ ತಲುಪಿದ್ದೇವೆ. ಇಪ್ಪತ್ತನೇ ಶತಮಾನದ ಸಾಹಿತ್ಯ ಕಾರ್ಯವು ಇಂತಹ ಪರಿಶುದ್ಧತೆಗೆ ಮನಸ್ಸುಮಾಡಿರುವುದು ಸತ್ಯವಾದರೂ ಈ ಮನಸ್ಸಿನ ಅರಿವಿನಲ್ಲಿ ಇಂದಿಗೂ ಹಲವು ಬಾಗಿಲುಗಳು ಮುಚ್ಚಿಯೇ ಇವೆ. ಈ ಪರಿಶುದ್ಧತೆಯು ಯಾವಾಗಲು ಪರಿಶುದ್ಧವೇ ಆಗಿರುತ್ತದೆ. ಇದನ್ನು ಸೌಂದರ್ಯವೆನ್ನಬಹುದು. ಈ ಸೌಂದರ್ಯದ ಕಣಜದಲ್ಲಿ ಪಂಪನಾದಿಯಿಂದ ಇಪ್ಪತ್ತನೇ ಶತಮಾನದ ಹಲವು ಅರ್ಥಸಾರಗಳು ಸೇರಿಹೋಗಿವೆ. ಸುಲಭವಾಗಿ ಇವುಗಳನ್ನು ಗ್ರಹಿಸುವುದಾದರೆ ಯಾವ ಸಾಹಿತ್ಯದಲ್ಲಿ ಒಂದಕ್ಷರವು ವ್ಯತ್ಯಾಸವಿಲ್ಲದೇ ಓದುಗಳಲ್ಲಿ ಚೇತನವಾಗುವುದೋ ಅದೇ ಅನಂತ ಸಾಹಿತ್ಯ ಸಾರ. ಈ ಎಲ್ಲಾ ಸಾಹಿತ್ಯವನ್ನು ಪರಿಶುದ್ಧತೆಯ ತೆಕ್ಕೆಗೆ ತಂದು ಸೌಂದರ್ಯವೆAದಿರುವೆನು. ಈ ಸಾಹಿತ್ಯದಲ್ಲಿ ಈಗಾಗಲೇ ಸವೆಯದ ಸವಿಯಂತೆ ಒಂದು ಸೌಂದರ್ಯವಡಗಿರುತ್ತದೆ. ಅದನ್ನು ಕಾಣಲು ನಮ್ಮ ಅಂತರAಗದ ಕಣ್ಣುಗಳ ಶುಚಿತನ ಬೇಕಾಗಿದೆ. ಈ ಶುಚಿತ್ವವೇ ಸೌಂದರ್ಯದ ಶುಚಿ. ವಿಮರ್ಶೆ ಎಂದರೆ ಈ ಶುಚಿಯ ಕಾರ್ಯವೇ ಆಗಿದೆ. ಕನ್ನಡ ಸಾಹಿತ್ಯದ ವರ್ತಮಾನ ಓದುಗರಾದ ನಾವು ಪಶ್ಚಿಮ ಕಣ್ಣುಗಳಲ್ಲಿ ಜ್ಞಾನವನ್ನು ಕಂಡರೂ, ಸಿದ್ಧಾಂತಗಳ ಸ್ವೀಕರಣೆ, ನೋಟಗಳನ್ನು ಕಳಚಬೇಕಿದೆ. ನಮ್ಮ ಮಣ್ಣಿಗೂ ಹಲವು ಕಣ್ಣುಗಳಿವೆ. ಆ ಕಣ್ಣುಗಳ ತೆರೆಯುವ, ಧರಿಸುವ ಕಾರ್ಯ ನಮ್ಮದಾಗಬೇಕಿದೆ. ವಿಮರ್ಶೆಗೆ ಹೊಸ ಅರ್ಥವನ್ನು ಸೃಷ್ಟಿಸಿಕೊಳ್ಳುವುದು ನಮ್ಮ ಧರ್ಮವೇ ಹೊರೆತು, ಸ್ವೀಕಾರವಲ್ಲ. ಬೇಂದ್ರೆ ಸಾಹಿತ್ಯವನ್ನು ‘ಸಹೃದಯ ವಿಮರ್ಶೆ’ಯ ಹೊಸ ಓದುವಿನಲ್ಲಿ ಸಂಶೋಧನೆಗೆ ತೊಡಗಿದ ನನಗೆ ಅನಿಸಿದ ಭಾವ ಶುಚಿಗಳನ್ನು ಇಲ್ಲಿ ಸಂಗ್ರಹಿಸಿರುವೆ. ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕಿರಣಗಳೆಂಬ ನೆಪದಲ್ಲಿ ಈ ಅಧ್ಯಯನಗಳ ಫಲಿತವು ಮೂಡಿದೆ. ಇದು ಓದುವಿನ ಹೊಸ ಹೆಜ್ಜೆ. ಹದಗೊಳ್ಳುತ್ತಿರುವ ಅರ್ಥಸಾರ. ಈ ವಿಚಾರಗಳನ್ನೆಲ್ಲಾ ನೀವು ವಿಸ್ತರಿಸಬಹುದು. ಜ್ಞಾನ ಬೆಳೆದಷ್ಟೂ ವಿಜ್ಞಾನವಾಗುತ್ತದೆ. ಮತ್ತೆ ಮತ್ತೆ ಹೊಸ ಪ್ರಯೋಗಗಳ ಆವಿಷ್ಕಾರಕ್ಕೆ ನಾಂದಿಯಾಗುತ್ತದೆ. ಸಾಹಿತ್ಯ ಇಂತಹ ಎಲ್ಲಾ ಸಹೃದಯರ ಆಸ್ತಿ.
ಬೇಂದ್ರೆ ಅವರ ಬಾಲ್ಯವನ್ನು ‘ಬಾಲ್ಯಕಾಂಡ’ದ ಜೊತೆಗೆ, ‘ಅಜ್ಜಿ : ಗೋದೂಬಾಯಿ’, ‘ಗೋದಲೆಗೆ ಬಾ ಗೋದು ಹೇ !’, ‘ತಂದೆ ರಾಮಚಂದ್ರ’, ‘ತಾಯಿ-ಪಾರ್ವತಿ-ಅಂಬಿಕೆ’, ‘ಓ ತಾಯೇ’, ‘ಮಾತೆ !’, ‘ನಲ್ ತಾಯಿ’ ಈ ಎಲ್ಲಾ ಕವಿತೆಗಳು ಅತ್ಯಂತ ಸಮರ್ಥವಾಗಿ ದೇಸಿಯ ಬೇರುಗಳನ್ನು ಸ್ಪಷ್ಟಪಡಿಸಿವೆ. ಬಾಲ್ಯದ ನೆನಪು, ಪ್ರೇರಣೆ, ಆಟಗಳು ಈ ವಿಚಾರಗಳೇ ಕಾವ್ಯದ ವಿಚಾರಗಳಾಗಿ ಮುಂದೆ ಪ್ರತಿನಿಧಿಸುತ್ತವೆ. ‘ಕರುಳಿನ ಸಂಬAಧ ತಿಳಿಯುವುದು ಕರುಳಿಗೆ ತಲೆಗೇನು ಕಂಡೀತು ಅದರ ತಲೆ! ಆದರೂ, ಏನೇನೂ ಆದರು, ಮೈಯಂಥ ಮೈಗೂನೂ ಹೊಳೆಯುವುದದರ ನೆಲೆ’ ಎನ್ನುವಾಗ ಕರುಳ ಸಂಬಂಧದಂತೆ ಕಾವ್ಯದ ಬೇರುಗಳು ಸೃಷ್ಟಿಗೊಂಡ ಕ್ರಿಯೆಯನ್ನು ವರ್ಣಿಸುವರು. ಕಾವ್ಯದ ನಿಜವಾದ ಕರುಳಿನ ಸಂಬಂಧದಂತೆ ಅನುಭವಕ್ಕಿಂತಲೂ ಆಳವೆನ್ನುವುದು ಬೇಂದ್ರೆ ಅವರ ಚಿಂತನೆ. ‘ತೆಯ್ದದ್ದೆ ತೆಯ್ದದ್ದು ತುಟಿಗೆರೆ ಬಿಚ್ಚಿರಲು, ಉಸಿರೆ ಆಗುವುದಣ್ಣ ಸಾಕಾರವು!, ಯಾವ ತಿಪ್ಪೆಯ ಬಸಿರ ಬಿರಕಿಗೆ ಮೋಡಿತ್ತೊ, ಮಾವಿನ ಪೀಪಿಯ ಆಕಾರವು?’ ಎನ್ನುವ ಆಶ್ಚರ್ಯ ಹಾಗೂ ಪ್ರಶ್ನೆಗಳಿಗೆ ಕಾರಣವಾಗುವ ಈ ಸಾಲು ವಿಶೇಷವಾದುದು. ಜಿ. ಕೃಷ್ಣಪ್ಪ ಅವರು ಈ ಸಾಲುಗಳನ್ನು ಸಂಶೋಧನೆ ನಡೆಸಿ ಅದೊಂದು ಗ್ರಾಮೀಣ ಆಟವಾದ ಮಾವಿನ ವಾಟೆಯಿಂದ ಹೊಮ್ಮಿದ ನಾದವಾಗಿ ತಿಳಿಸಿದ್ದಾರೆ. ಈ ಉತ್ತರದಿಂದ ದೇಸಿ ಪ್ರಜ್ಞೆಯು ಬೇಂದ್ರೆ ಅವರಲ್ಲಿ ಮೂರ್ತಗೊಂಡ ಬಗೆಗಳನ್ನು ಆಳವಾಗಿ ಸ್ಪಷ್ಟಪಡಿಸುತ್ತದೆ. ಈ ಕಾವ್ಯ ದೇಸಿಯ ಅರ್ಥದೊಂದಿಗೆ ಸೀಮಿತವಾಗದೆ ಲೋಕಜ್ಞಾನವಾಗಿಯೂ ಹೊರಹೊಮ್ಮಿದೆ. ಕಾವ್ಯದ ರಚನೆ, ಸೃಷ್ಟಿಯ ಬಗೆ, ಕಾವ್ಯದ ವಸ್ತುಗಳು ಇರುವ ಬಗೆ, ಅದನ್ನು ಕುಸುರಿಸುವ ರೀತಿಯನ್ನೂ ಸ್ಪಷ್ಟಪಡಿಸಿದ್ದಾರೆ. ತಿಪ್ಪೆಯೆಂಬ ಅಗೌರವದಲ್ಲೂ ಸಮಾಜಕ್ಕೆ ಗೌರವ ಸೂಚಕ ಪ್ರತಿನಿಧಿತ್ವದ ನಾದ ಹೊಮ್ಮಿಸುವ ಜೀವಸೃಷ್ಟಿಯ ಶಕ್ತಿ ಇದೆ ಎಂಬ ಸಾರ್ಥಕತೆಯ ಪಾಠವನ್ನು ನಾಲ್ಕು ಸಾಲಿನಲ್ಲಿ ನಿರ್ಮಿಸಿದ್ದಾರೆ. ಇಲ್ಲಿ ಕುವೆಂಪು ಅವರ ‘ಗೊಬ್ಬರ’ ಕವಿತೆ ಕೂಡ ಈ ಸಾರ್ಥಕ ಚಿಂತನೆಯನ್ನು ಅಭಿವ್ಯಕ್ತಪಡಿಸಿರುವ ಬಗೆಯನ್ನು ನೆನೆಯಬಹುದು.
©2024 Book Brahma Private Limited.