ರಹಮತ್ ತರೀಕೆರೆ ಅವರ ಕೃತಿ ಕರ್ನಾಟಕದ ಮೊಹರಂ. ಕುಲಪತಿಗಳು ಡಾ. ಹಿ.ಚಿ. ಬೋರಲಿಂಗಯ್ಯ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಮೊಹರಂ ಸಾಹಿತ್ಯವು, ಕನ್ನಡ ಜನಪದ ಸಾಹಿತ್ಯದ ಒಂದು ಪ್ರಮುಖ ಧಾರೆಯಾಗಿದೆ. ಎಲ್ಲ ಜನಪದ ಹಾಡುಪರಂಪರೆಗಳಿಗೆ ಇರುವಂತೆ, ಈ ಸಾಹಿತ್ಯಕ್ಕೂ ಧಾರ್ಮಿಕ ಆಚರಣೆ, ವೇಷಗಾರಿಕೆ, ಸಂಗೀತ ಹಾಗೂ ನೃತ್ಯಗಳ ಆಯಾಮವಿದೆ. 'ಧಾರ್ಮಿಕ' ಎನ್ನಬಹುದಾದ ಈ ಸಾಹಿತ್ಯವು, ಧರ್ಮ ಮತ್ತು ಸಂಸ್ಕೃತಿಗಳು ಕರ್ನಾಟಕದಲ್ಲಿ ಮಾಡಿರುವ ಕೂಡುಪ್ರಯೋಗದ ಫಲವಾಗಿದೆ. ಕನ್ನಡದಲ್ಲಿ ಹಲವಾರು ಮೊಹರಂ ಪದಗಳ ಸಂಗ್ರಹಗಳು ಪ್ರಕಟವಾಗಿವೆ. ಮೊಹರಂ ಆಚರಣೆ ಕುರಿತ ಮಾಹಿತಿಪ್ರಧಾನ ಪುಸ್ತಕಗಳೂ ಬಂದಿವೆ. ಆದರೆ ಈ ಸಾಹಿತ್ಯ ಮತ್ತು ಆಚರಣೆಗಳ ಹಿಂದಿನ ತಾತ್ವಿಕತೆಯನ್ನು ವಿಶ್ಲೇಷಿಸುವ ಅಧ್ಯಯನಗಳು ಹೆಚ್ಚು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿ, ಮೊಹರಂ ಆಚರಣೆ ಮತ್ತು ಹಾಡುಗಳ ಹಿಂದಿರುವ ಮೀಮಾಂಸೆಯನ್ನು ಶೋಧಿಸುವ ಯತ್ನ ಮಾಡುತ್ತದೆ. ಕನ್ನಡದಲ್ಲಿ ಕೆಲವು ವರ್ಷಗಳಿಂದ ಕನ್ನಡ ಸಾಹಿತ್ಯ ಪರಂಪರೆಯ ಮೂಲಕವೇ ಕನ್ನಡ ಸಾಹಿತ್ಯ ಮೀಮಾಂಸೆಯ ಹುಡುಕಾಟಗಳು ನಡೆಯುತ್ತಿವೆ. ಇಂತಹ ಸನ್ನಿವೇಶದಲ್ಲಿ, ಇಲ್ಲಿ ಶೋಧನೆಗೆ ಒಳಗಾಗಿರುವ ಮೊಹರಂ ಸಾಹಿತ್ಯ ಮೀಮಾಂಸೆಗೆ ಮಹತ್ವವಿದೆ. ಈ ಕೃತಿಯ ಹಿಂದೆ ಕರ್ನಾಟಕದ ನೂರಾರು ಹಳ್ಳಿಗಳ ತಿರುಗಾಟವಿದೆ; ನೂರಾರು ಶಾಹಿರರನ್ನು, ಗಾಯಕರನ್ನು ಹಾಗೂ ಕೇಳುಗರನ್ನು ಭೇಟಿ ಮಾಡಿದ ಅನುಭವವಿದೆ. ವಿಶ್ಲೇಷಣೆ ವ್ಯಾಖ್ಯಾನಗಳಿವೆ. ಈ ಕೃತಿ ಮೊಹರಂ ಸಾಹಿತ್ಯ ಮೀಮಾಂಸೆಯನ್ನು ಮಾತ್ರವಲ್ಲ, ದುಡಿಯುವ ವರ್ಗಗಳ ಮೂಲಕ ಪ್ರಕಟವಾಗುತ್ತಿರುವ ಜನಸಂಸ್ಕೃತಿಯನ್ನು ಸಹ ಶೋಧಿಸುತ್ತಿದೆ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.