‘ಅನಾವರಣ’ ಲೇಖಕ ಚನ್ನಬಸವಯ್ಯ ಹಿರೇಮಠ ಅವರ ಸಂಶೋಧನ ಪ್ರಬಂಧಗಳ ಸಂಕಲನ. ಈ ಕೃತಿಗೆ ಡಾ.ಬಿ.ವ್ಹಿ.ಶಿರೂರ ಅವರು ಅನಾವರಣ: ಒಂದು ಅವಲೋಕನ ಎಂಬ ಶೀರ್ಷಿಕೆಯಡಿ ದೀರ್ಘ ಮುನ್ನುಡಿ ಬರೆದು ‘ಡಾ. ಚೆನ್ನಬಸವಯ್ಯ ಅವರು ರಾಯಚೂರಿನಂಥ ನಿರ್ವಾತ ಪ್ರದೇಶದಲ್ಲಿದ್ದುಕೊಂಡು ಶಾಸನ, ಸಂಶೋಧನೆಗಳಂಥ ಕಲ್ಲು-ಮುಳ್ಳಿನ ಹಾದಿಯನ್ನು ಕ್ರಮಿಸುತ್ತಿದ್ದಾರೆ. ಅವರು ಕುರುಗೋಡು ಸಿಂದರನ್ನು ಕುರಿತು ಮಹಾಪ್ರಬಂಧ ರಚಿಸಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಎಡೆದೊರೆನಾಡು, ರಾಯಚೂರು-ಕೊಪ್ಪಳ ಜಿಲ್ಲೆಯ ಶಾಸನಗಳು, ಮಾನ್ವಿ ತಾಲೂಕಿನ ಶಾಸನಗಳು, ಮಸ್ಕಿಯ ಶಾಸನಗಳು ಮೊದಲಾದ ಕೃತಿಗಳನ್ನು ರಚಿಸಿ ಶಾಸನ-ಸಂಶೋಧನ ಕ್ಷೇತ್ರದಲ್ಲಿ ತಮ್ಮ ನೆಲೆಯನ್ನು ಗಟ್ಟಿಯಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ಬಂದ ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು ಕೃತಿ ಅವರ ಶಾಸನಗಳ ವ್ಯಾಪಕವಾದ, ಆಳವಾದ ಅಧ್ಯಯನಕ್ಕೆ ಸಾಕ್ಷಿ ನುಡಿಯುತ್ತಿದೆ. ಈ ಮೊದಲು ಹೊರತಂದ ಸತ್ಯದಹಾದಿ-1ರಲ್ಲಿ ಸಂಶೋಧನೆಗೆ ಸಂಬಂಧಿಸಿದ 30 ಲೇಖನಗಳಿವೆ. ಪ್ರಸ್ತುತ ಅನಾವರಣ ಅವರ ಸಮಗ್ರ ಸಂಪುಟ. ಇಲ್ಲಿ 80 ಲೇಖನಗಳಲ್ಲಿ ಸುಮಾರು 27ಲೇಖನಗಳು ಶರಣರಿಗೆ ಸಂಬಂಧಿಸಿವೆ. 4ರಿಂದ 7ನೇ ಲೇಖನಗಳಲ್ಲಿ ಈ ಹಿಂದಿನ ವಿದ್ವಾಂಸರ ಅಭಿಪ್ರಾಯಗಳನ್ನೆಲ್ಲ ಸೋಸಿ ಶಂಕರದಾಸಿಮಯ್ಯನ ಪೂರ್ವಾಶ್ರಮದ ಹೆಸರು ಗೋವಿಂದ ಅಲ್ಲ, ಶಂಕರ ಅಥವಾ ಶಂಕರದಾಸ. ಕುಲ ಮತ್ತು ವೃತ್ತಿ ಚಿಪ್ಪಿಗ ಇನ್ನು ಜೇಡರದಾಸಿಮಯ್ಯನ ಊರು ದೇವದುರ್ಗ ತಾಲೂಕಿನ ಗೊಬ್ಬೂರು, ಆತನಿಗೆ ಕಾಟೇಗೌಡನೆಂಬ ಮಗನಿದ್ದ ಎಂದು ಹಲವಾರು ಆಧಾರಗಳ ಮೂಲಕ ವ್ಯಕ್ತಗೊಳಿಸಿರುವ ಅಭಿಪ್ರಾಯವನ್ನು ಒಪ್ಪಬಹುದಾಗಿದೆ. ಕಲ್ಯಾಣದ ಶರಣರು ಸ್ಮರಿಸುವ ಕರಡಕಲ್ಲ ಬಿಲ್ಲಮರಾಯನ ಚರಿತ್ರೆಯಲ್ಲಿರುವ ಗೊಂದಲವನ್ನು ಇಲ್ಲಿ ನಿವಾರಿಸಲು ಪ್ರಯತ್ನಿಸಲಾಗಿದೆ. ಇಲ್ಲಿನ ಹಲವು ಲೇಖನಗಳನ್ನು ಹೆಚ್ಚಾಗಿ ಶಾಸನಾಧಾರಗಳ ಮೇಲೆ ಮಂಡಿಸಲು ಪ್ರಯತ್ನಿಸಿದ್ದಾರೆ. ಹಲವೆಡೆ ಊಹೆಯನ್ನೂ ಮಾಡಿದ್ದಾರೆ. ಆ ಮೂಲಕ ಸಂಶೋಧಕರಿಗೆ, ಚಿಂತಕರಿಗೆ ವಿಚಾರಿಸಲು ಹಾದಿಯನ್ನು ಮಾಡಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದ್ದಾರೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.
©2024 Book Brahma Private Limited.