‘ಊರು’ ಕೃತಿಯು ಬಸವರಾಜ ಕೋಡಗುಂಟಿ ಅವರ ವಿವಿಧ ಪ್ರದೇಶಗಳ ಕುರಿತ ಲೇಖನ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿ: "ಹಯ್ದರಾಬಾದ ಕrರ್‍ನಾಟಕದ ಬಗೆಗೆ ತಿಳಿದುಕೊಳ್ಳುವ ನನ್ನ ಆಸೆಯೆ ಈ ಪ್ರಯತ್ನ. ಈ ಬಾಗ ಇತಿಹಾಸದ ಒಂದು ಅಚ್ಚರಿ, ಸಮಾಜದ ಒಂದು ಬೆರಗು, ಬದುಕಿನ ಒಂದು ಸೋಜಿಗ. ಅದು ಶ್ರೀಮಂತ ಇತಿಹಾಸ. ನನಗೆ ಚೋಜಿಗ (ಸೋಜಿಗ)ವಾಗಿ ಕಾಣುವುದು, ಈ ಬಾಗದ ಮಂದಿಗೆ ದಿನವೂ ಬೆಳಗೆದ್ದು ಬಯಲಿಗೆ ಹೋಗುವಾಗ ಇತಿಹಾಸ ಕಾಲಿಗೆ ತೊಡರುತ್ತದೆ, ಗುಡಿಗುಂಡಾರ, ಶಾನಗಳಿಗೆ ಮನೆಯ ದನಕರುಗಳನ್ನ ಕಟ್ಟುತ್ತೇವೆ, ಸಂದಿಗೊಬ್ಬ ಸಾದು, ಸಂತ, ಸೂಪಿಗಳು, ಓಣಿಗೊಬ್ಬ ತತ್ವಪದಕಾರ, ಊರತುಂಬ ಹಾಡು, ಕತೆ, ಕುಣಿತ, ಕಲೆ, ಈ ರೂಪದಲ್ಲಿ ದೊಡ್ಡ ಪಿಲಾಸಪಿ, ಜಗತ್ತು ಬೆರಗುಗೊಳ್ಳುವ ಕಲೆ, ಶಿಲ್ಪಕಲೆ, ಚಿತ್ರಕಲೆ ಇಲ್ಲಿವೆ, ಕಲ್ಲಿನ ಯುಗದ ಅವಶೇಶಗಳು, ರಾಜಕೇಂದ್ರ, ದರ ಕೇಂದ್ರ, ವ್ಯಾಪಾರ ಕೇಂದ್ರ, ಶಿಲ್ಪಕೇಂದ್ರಗಳು, ಪಾರಿಸರಿಕ ಶ್ರೀಮಂತ ನೆಲೆಗಳು ಕೇಳರಿಲ್ಲದೆ ಹಾದಿಬದಿಯ ಚೆಲುವೆಯರಂತೆ ತುಟಿಯ ಮೇಲೆ ನಗುತ್ತಿವೆ. ಶಕ್ತಿನಗರದ ಕರೆಂಟಿನ ಕೆಳಗೆ ಕತ್ತಲೆಯೊಳಗೆ ಸಾವಿರದ ತಾಕತ್ತಿನ ಹೊಲತಿಯರು ಕುಣಿಯುತ್ತಿದ್ದಾರೆ. ಕನ್ನಡಕ್ಕೆ ಗತಿಯನು ಕಟ್ಟಿಕೊಟ್ಟ ಶ್ರೀವಿಜಯನ ನಗು ಇಲ್ಲಿ ಕೊಳೆತು ನಾರುವ ಗಟಾರದ ನೀರಿನೊಳಗೆ ಪಾಚಿಗೆ ಅಂಟಿಕೊಂಡು ಕೇಳುತ್ತಲೆ ಇದೆ, ಈ ನೆಲವನರಸಿ ಬಂದ ಜಗದ ದರ ಪಂತಗಳೆಲ್ಲ ಇಲ್ಲಿ ಎದ್ದ ದೂಳಿನ ಕೆಳಗೆ ಹೂತುಕೊಂಡಿವೆ, ದೇಶದೇಶಗಳನೆಲ್ಲ ಚೆಂಡಾಡಿದ ರಾಜಮಹಾರಾಜರುಗಳ ತಲಿಮ್ಯಾಗಳ ಬಂಗಾರದ ಕಿರೀಟದ ಮಣಿಗಳು ಮಾಸಿದ ಮಸಿ ಹಚ್ಚಿಕೊಂಡು ಮುನುಗುತ್ತಿವೆ, ಜಗತ್ತಿಗೆ ಬೆಳಕನ್ನು ಕೊಡುವುದಕ್ಕೆ ದುಡಿದು ಮಡಿದ ಅಪಾರ ವಿದ್ವತ್ತು, ಸುಜನಾತ್ಮಕತೆ ಎಲ್ಲವು ಇಲ್ಲಿ ಹರಿಯುತ್ತಿರುವ ನದಿಹಳ್ಳಗಳಲ್ಲಿ ನೀರುಕಮ್ಮಿಯಾಗಿ ಕೊಳೆಯಾಗಿ ಕೂತು ಬಿಟ್ಟಿವೆ, ಅಲ್ಲಮನ ಬೆರಗಿನ ಬಯಲು ದೂಳಿನೊಳಗೆ ಅವಿತುಕೊಂಡಿದೆ, ಪಂಪನ ಬೆರಗಿನ ಕಳವಿಯ ಗದ್ದೆಗಳೊಳಗಿನ ಹಕ್ಕಿಗಳ, ಪ್ರೇಮಿಗಳ ಸರ ಕೇಳರಿಲ್ಲದೆ ಒಳಗೊಳಗೆ ಬೇಸರಿಸಿಕೊಳುತಿವೆ, ಇಲ್ಲಿ ಯಲ್ಲವ್ವನ ಉದೊ ಎಂಬ ದನಿ, ಉಗ್ಗಿದ ಬಂಡಾರ ಮುಗಿಲನ್ನು ಮುಟ್ಟಿಕೊಂಡೆ ಇದೆ, ನೆಲದ ನೂರು ಹಂತಗಳು ಕುಣಿಯದ ಕಾಲಗತಿಯನೆ ಕಳೆದುಕೊಂಡಂತೆ ಹಂಬಲಿಸುತಿವೆ, ಬವುದ್ದನ ಪ್ರೀತಿಯ ಬೀಮೆ ಸದ್ದು ಕಳೆದುಕೊಂಡು ಹರಿದು ಹೋಗುತ್ತಲೆ ಇದೆ, ಕೊಪಣದ ಜಿನಬೆಳಗು ಮಾಸಿ ಅವಿತುಕೊಂಡಿದೆ. ದೇಶಕೆಲ್ಲ ಬೆಳಕು ಕೊಟ್ಟ ಕಲ್ಯಾಣ ಸೋತು ಸೊರಗಿದೆ, ಅದಮ್ಯ ಚೇತನವಾಗಿ ಬೆಳಗಿದ ಮಂತ್ರಾಲಯ ಕೊರಗುತಿದೆ,"
©2024 Book Brahma Private Limited.