ಕನ್ನಡ ವಾಙ್ಮಯದಲ್ಲಿ ಮುಂಬೈ ಹಾಸುಹೊಕ್ಕಾಗಿದೆ. ಈ ಮಾಯಾನಗರಿ ಸಾಂಸ್ಕೃತಿಕ ಕರ್ನಾಟಕದ ಭಾಗವೇ ಆಗಿ ಬಿಟ್ಟಿದೆ. 'ಮುಂಬೈ ಭಾರತದ ಭಾಗ್ಯ ನಗರಿ' ಎಂಬ ಕೊಂಡಾಟಕ್ಕೆ ಪಾತ್ರವಾಗಿದೆ. ಭಾರತದ ಮಹಾನಗರಗಳಲ್ಲಿ ಮುಂಬೈಗೆ ವಿಶಿಷ್ಟವಾದ ಸ್ಥಾನಮಾನವಿದೆ. ಮುಂಬೈ ಒಂದು ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿರುವ ನಗರ, ಪೋರ್ಚುಗೀಸರು ಹಾಗೂ ಬ್ರಿಟಿಷರ ಕಾಲದಲ್ಲೇ 'ಭಾರತದ ಹೆಬ್ಬಾಗಿಲು ಎಂದು ಕರೆಸಿಕೊಂಡಿರುವ ಈ ದೈತ್ಯ ನಗರದ ಇತಿಹಾಸ ಬಹು ರೋಚಕವಾಗಿದೆ. ಬ್ರಿಟಿಷರು ಮುಂಬೈ ಮಹಾನಗರವನ್ನು ಕಟ್ಟಿ ಬೆಳೆಸಿ ಬಹುದೊಡ್ಡ ವಾಣಿಜ್ಯ ನಗರವನ್ನಾಗಿ ಮಾಡಿದರು.
ಭಾರತದಲ್ಲೇ ಮೊತ್ತಮೊದಲು ರೈಲು ಸೌಲಭ್ಯ 1853ರಲ್ಲಿ ಮುಂಬೈಯಿಂದ ಥಾಣೆಯವರೆಗೆ ಆರಂಭಗೊಂಡಿತು. 1857ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಮೂರು ವಿಶ್ವವಿದ್ಯಾಲಯಗಳು ಆರಂಭವಾದವು. ಅವುಗಳಲ್ಲಿ ಮುಂಬೈ ವಿಶ್ವವಿದ್ಯಾಲಯವೂ ಒಂದು. 1926ರಲ್ಲಿ ಭಾರತದಲ್ಲಿ ಮೊದಲ ಬಾರಿಗೇ ಮುಂಬೈಯಲ್ಲಿ ಬಸ್ ಸೇವೆ ಆರಂಭವಾಯಿತು. ಮುಂಬೈನ ಜೇಮ್‌ಷಡ್‌ಜಿ ಟಾಟಾ ಮೊದಲ ಬಾರಿಗೆ ಕಾರು ಖರೀದಿಸಿದ ಭಾರತೀಯ, 1928ರಲ್ಲಿ ಮೊದಲ ಬಾರಿಗೆ ಮುಂಬೈನ ಜುಹೂದಲ್ಲಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಾಯಿತು. ವಾಣಿಜ್ಯ ನಗರವಾಗಿ, ಉದ್ಯಮ ನಗರವಾಗಿ ಮುಂಬೈ ಜನಪ್ರಿಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮುಂಬೈ ನಮ್ಮ ದೇಶದ ಎಲ್ಲ ಆಗುಹೋಗುಗಳ ಕೇಂದ್ರವಾಗಿತ್ತು. ಇವತ್ತಿಗೂ ಸಿನಿಮಾ, ಕ್ರಿಕೆಟ್, ಷೇರು ಮಾರುಕಟ್ಟೆ, ಬ್ಯಾಂಕ್, ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮುಂಬೈ ಸದಾ ಸುದ್ದಿಯಲ್ಲಿದೆ. ಮುಂಬೈ ಬಹು ಭಾಷಿಕ, ಬಹು ಸಂಸ್ಕೃತಿಯ ವರ್ಣರಂಜಿತ ನಗರ. ಮುಂಬೈಯನ್ನು ಕಟ್ಟಿ ಬೆಳೆಸುವಲ್ಲಿ ಕನ್ನಡಿಗರು ಮಹತ್ವದ ಯೋಗದಾನವನ್ನು ನೀಡಿದ್ದಾರೆ.
ಮುಂಬೈ ಕನ್ನಡಿಗರ ಸಾಹಸ ಸಾಧನೆಗೆ ಸುಮಾರು ಇನ್ನೂರು ವರ್ಷಗಳ ಇತಿಹಾಸವಿದೆ. ಅನ್ಯ ಕಾರಣಗಳಿಂದ ಮುಂಬೈಗೆ ವಲಸೆ ಬಂದ ಕನ್ನಡಿಗರು ಗೈದ ವಿಭಿನ್ನ ಬಗೆಯ ಪರಿಚಾರಿಕೆ ಯಾರನ್ನೂ ಬೆರಗು ಹುಟ್ಟಿಸುತ್ತದೆ. ಮುಂಬೈಯಲ್ಲಿ ಇವತ್ತಿಗೂ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿರುವುದು ಉಲ್ಲೇಖನೀಯ ಅಂಶ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿಹೆಚ್ಚು ಕನ್ನಡಿಗರಿರುವ ಪ್ರದೇಶ ಮುಂಬೈ. 'ಮುಂಬೈ' ಕನ್ನಡಿಗರ ಎರಡನೆಯ ತವರೂರು. ಮುಂಬೈ ಶ್ರಮ ಸಂಸ್ಕೃತಿಯ ನಗರ. ಈ ಮಹಾನಗರದಲ್ಲಿ ಕನ್ನಡಿಗರು ಪಟ್ಟಪಾಡು ಅದನ್ನು ಅವರು ಹಾಡಾಗಿಸಿದ ಬಗೆಯ ಸಂಕಥನವನ್ನು ಇಲ್ಲಿ ದಾಖಲಿಸಲಾಗಿದೆ. ಮುಂಬೈ ಶತಮಾನಗಳಿಂದ ಸಾಹಿತ್ಯ ವಲಯವಾಗಿ ಮಿಂಚಿದ ನಗರ. ಮುಂಬೈಯಲ್ಲಿರುವಷ್ಟು ಕನ್ನಡ ಸಂಘ ಸಂಸ್ಥೆಗಳು ಜಗತ್ತಿನ ಯಾವ ಮೂಲೆಯಲ್ಲಿಯೂ ಇಲ್ಲ ಎಂಬುದು ಚಾರಿತ್ರಿಕ ಸಂಗತಿ. ಮುಂಬೈ ಕನ್ನಡಿಗರ ಸಾಂಸ್ಕೃತಿಕ ಸಾಧನೆಗಳ ಅವಲೋಕನ, ವಿಶ್ಲೇಷಣೆ ಈ ಕೃತಿಯ ಹೂರಣ.
©2024 Book Brahma Private Limited.