‘ಕನ್ನಡ ಸಂಶೋಧನೆಗೆ ಮುಂಬೈ ಕೊಡುಗೆ’ ಕಲಾ ಭಾಗ್ವತ್ ಅವರ ಅಧ್ಯಯನ ಕೃತಿಯಾಗಿದೆ. ಭಾರತದ ಮಹಾನಗರವಾದ ಮುಂಬೈ ಬಹು ಭಾಷಿಕರ, ಬಹು ಧರ್ಮೀಯರ, ಬಹು ಸಂಸ್ಕೃತಿಯ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಕರ್ನಾಟಕಕ್ಕೂ ಮುಂಬೈಗೂ ಶತಮಾನಗಳ ಸಾಂಸ್ಕೃತಿಕ ಬಾಂಧವ್ಯವಿದೆ. ಕನ್ನಡಿಗರು ಸಾಹಸಿಗಳು, ಶ್ರಮಜೀವಿಗಳು. ಅವರು ಬೌದ್ಧಿಕ ಮತ್ತು ದೈಹಿಕ ಶ್ರಮಕ್ಕೆ ತೆರೆದುಕೊಂಡು ಮುಂಬಯಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಾಣಿಜ್ಯ, ಉದ್ಯಮ, ಶಿಕ್ಷಣ, ಕ್ರೀಡೆ, ಕಲೆ, ಕೈಗಾರಿಕೆ ಹೀಗೆ ವಿವಿಧ ರಂಗಗಳಲ್ಲಿ ಕನ್ನಡಿಗರು ಮಹೋನ್ನತ ಸಾಧನೆ ಮಾಡಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಗೆ ಮುಂಬೈ ಲೇಖಕರ ಕೊಡುಗೆ ಅನನ್ಯವಾದದ್ದು. ಮುಂಬೈಯಲ್ಲಿರುವ ಕನ್ನಡಿಗರು ಪಾಶ್ಚಾತ್ಯ ಸಂಸ್ಕೃತಿಯ ದಾಳಿಯಲ್ಲಿ ಕೊಚ್ಚಿ ಹೋಗದೆ ಮತ್ತೆ ತಾವು ಕನ್ನಡದ ಧ್ಯಾನದಲ್ಲಿ, ಕನ್ನಡ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವಲ್ಲಿ ಕ್ರಿಯಾಶೀಲರಾಗಿರುವುದು ನಮ್ಮೆಲ್ಲರ ಅಭಿಮಾನಕ್ಕೆ ಕಾರಣವಾಗಿದೆ.
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ತಾನು ನಿಂತ ನೆಲದ ಶೋಧದಲ್ಲಿ ತೊಡಗಿಕೊಂಡಿರುವುದು ಮತ್ತು ಸಾಹಿತ್ಯ ಸಂಸ್ಕೃತಿಯ ಸಾಧನೆಗಳ ಸಮೀಕ್ಷಾತ್ಮಕ ಅಧ್ಯಯನಗಳನ್ನು ಪ್ರಕಟಣೆಗೊಳಿಸುತ್ತಲಿರುವುದು ಕನ್ನಡ ಪ್ರಕಟಣ ಪ್ರಪಂಚದಲ್ಲಿ ವಿನೂತನವಾದ ಸಾಧನೆಯಾಗಿದೆ. ಕ್ಷೇತ್ರಕಾರ್ಯ ಸಂಶೋಧನೆ, ದಾಖಲೆ ಆಧಾರಿತ ಸಂಶೋಧನೆ, ತೌಲನಿಕ ಸಂಶೋಧನೆಗಳ ಮೂಲಕ ಕನ್ನಡ ಸಂಸ್ಕೃತಿಯ ಪ್ರಾಚೀನ ಮತ್ತು ಆಧುನಿಕತೆಯ ಶೋಧದಲ್ಲಿ ಅದು ನಮ್ಮನ್ನು ಬೆರಗುಗೊಳಿಸಿದೆ.
ಮುಂಬೈನ ಉದಯೋನ್ಮುಖ ಪ್ರತಿಭಾವಂತ ಲೇಖಕರಲ್ಲಿ ಕಲಾ ಚಿದಾನಂದ ಭಾಗ್ವತ್ ಅವರದು ಎದ್ದು ಕಾಣುವ ಹೆಸರು. ಮೂಲತಃ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳದೀಪುರದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಅವರು ಉತ್ಕಟ ಸಾಹಿತ್ಯಾಭಿಮಾನಿ. ಮುಂಬೈ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ. ಎ ಪದವಿ ಪಡೆದಿರುವ ಕಲಾ ಅವರು ಗಮಕ, ಸಂಗೀತ ಕ್ಷೇತ್ರದಲ್ಲೂ ಹಿಡಿತ ಸಾಧಿಸಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕವಿತೆ, ಕತೆ, ಬಿಡಿ ಬರಹಗಳು ಬೆಳಕು ಕಂಡಿವೆ.ʻವೈದ್ಯ ಭೂಷಣ ಡಾ. ಬಿ.ಎಂ ಹೆಗ್ಡೆ' ಇದು ಕಲಾ ಭಾಗ್ವತ್ ಅವರ ಚೊಚ್ಚಲ ಕೃತಿ ...
READ MORE