‘ಏಕೋರಾಮೇಶ್ವರ ಪುರಾಣ’ ಕೃತಿಯು ವೈ.ಸಿ. ಭಾನುಮತಿ ಅವರ ಗ್ರಂಥವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಹರದನಹಳ್ಳಿಯಲ್ಲಿ ದಿವ್ಯಲಿಂಗೇಶ್ವರ ದೇವಾಲಯವಿದೆ. ದಿವ್ಯಲಿಂಗೇಶ್ವರನಿಗೆ ಅಣಿಲೇಶ್ವರ, ಅಮೃತೇಶ್ವರ ಎಂಬ ಬೇರೆಬೇರೆ ಹೆಸರುಗಳೂ ಇವೆ. ಈ ದೇವಾಲಯವನ್ನು ಪುರುಸಗೌಡನ ಮಗ ಮಾರಗೌಡನು ಕ್ರಿ. ಶ. 1316ರಲ್ಲಿ ಕಟ್ಟಿಸಿದನು. 1 ಮಾರಗೌಡನು ಮಾಧವದಣ್ಣಾಯಕನ ಮನೆಗೂಡು ಆಗಿದ್ದನೆಂದು ತಿಳಿದು ಬರುತ್ತದೆ. ದಿವ್ಯಲಿಂಗೇಶ್ವರ ದೇವಾಲಯವು ವಿಸ್ತಾರವಾಗಿದ್ದು ಕಾಲದಿಂದ ಕಾಲಕ್ಕೆ ನವೀನ ಸೇರ್ಪಡೆಗಳಾಗಿವೆ. ಆದ್ದರಿಂದ ಇಲ್ಲಿನ ಶಿಲ್ಪದಲ್ಲಿ ಹೊಯ್ಸಳ ವಿಜಯನಗರ ಮೊದಲಾದ ಶೈಲಿಗಳನ್ನು ಗುರುತಿಸಬಹುದು. ದೇವಾಲಯದ ದಕ್ಷಿಣದಿಕ್ಕಿನ ಪೌಳಿಯಲ್ಲಿ ಅನೇಕ ಶಾಸನಗಳಿವೆ. ಇವು ದೇವಾಯಲದ ಇತಿಹಾಸವನ್ನು ರೂಪಿಸಲು ಸಹಾಯಕವಾಗಿವೆ. ದಿವ್ಯಲಿಂಗೇಶ್ವರ ದೇವಾಲಯವು ಗರ್ಭಗೃಹ, ಸುಖನಾಶಿ ಮತ್ತು ನವರಂಗಗಳನ್ನು ಒಳಗೊಂಡಿದೆ. ನವರಂಗದಲ್ಲಿ ನಾಲ್ಕು ಕಂಭಗಳಿವೆ. ಇವುಗಳ ಮೇಲೆ ಶಾಸನಗಳಿವೆ. ಈ ಕಂಭಗಳು ದೇವಾಲಯಕ್ಕೆ ಸಂದ ಕೊಡುಗೆಗಳಾಗಿವೆ. ದೇವಾಲಯದ ಒಳಗೆ ಬಲಭಾಗದಲ್ಲಿ ಸೂರ್ಯನ ಚಿತ್ರವಿದೆ. ಉತ್ತರ ಭಾಗದಲ್ಲಿ ಪಾರ್ವತಿಯ ಗುಡಿ ಇದೆ. ಇದು ಆ ಬಳಿಕದ ರಚನೆ. ಹೊರಗಿನ ನವರಂಗ, ಕಟಕಟೆ, ಕಂಭಗಳು, ದ್ವಾರಪಾಲಕರು, ವೀರಭದ್ರ ಪ್ರತಿಮೆ, ಒಳಛಾವಣಿಯ ತಾಂಡವೇಶ್ವರ, ಮುಖಮಂಟಪ, ಅಂಕಣ ಗಳಂ ಇವೇ ಮೊದಲಾದುವುಗಳು ಕ್ರಿ. ಶ. 1340-1370ರ ಅವಧಿಯಲ್ಲಿ ನಿರ್ಮಾಣವಾಗಿವೆ. ವೀರಭದ್ರನ ಪ್ರತಿಮೆ ಸುಂದರವಾಗಿದೆ.
©2024 Book Brahma Private Limited.