‘ದಕ್ಷಿಣ ಭಾರತದಲ್ಲಿಯ ಹಸ್ತಪ್ರತಿ ಗ್ರಂಥಾಲಯಗಳು’ ಕೃತಿಯು ಎಸ್. ಆರ್. ಗುಂಜಾಳ ಹಾಗೂ ಶ್ರೀಶೈಲ ಎಸ್. ಪಾಟೀಲ ಅವರ ಸಂಪಾದಿತ ಬರವಣಿಗೆಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ದೇವರು ಮನುಷ್ಯನಿಗೆ ಕೊಟ್ಟಿರುವ ಮೂರು ಮಹಾಶಕ್ತಿಗಳು. ಆಲೋಚನೆ ಮಾಡುವುದು, ಮಾತನಾಡುವುದು, ಸಂತೋಷ ಪಡುವುದು. 'ಪ್ರಾಣಿಕೋಟಿಗಳಿಗಿಂತ ಮನುಷ್ಯನು ಶ್ರೇಷ್ಠನು' ಎಂಬುದಕ್ಕೆ ಈ ಮೂರು ಮಹಾಶಕ್ತಿಗಳೇ ಕಾರಣವಾಗಿವೆ. ಸೃಷ್ಟಿಕರ್ತನು ಮಾನವಕುಲಕ್ಕೆ ಪರಸ್ಪರ ಮಾತನಾಡುವ ಭಾಷಾಸಂಪತ್ತನ್ನು ಅನುಗ್ರಹಿಸಿರುವುದರಿಂದ ಮೃಗಗಳಿಗಿಂತಲೂ ಮನುಷ್ಯನು ತನ್ನ ಅಭಿಪ್ರಾಯಗಳನ್ನು ಇತರರಿಗೆ ತಿಳಿಯಪಡಿಸಲು ಸಂಜ್ಞೆ ಮತ್ತು ಚಿತ್ರಗಳಿಂದ ಕೆಲಮಟ್ಟಿಗೆ ಸಾಧ್ಯವಾಗುತ್ತದೆ. ಒಬ್ಬನು ಇನ್ನೊಬ್ಬನಿಗೆ ತನ್ನ ಅಭಿಪ್ರಾಯಗಳನ್ನು ತಿಳಿಸುವ, ಮಾತನಾಡುವ ಸೌಕರ್ಯ ಇರುವುದರಿಂದಲೇ ಮಾನವ ಜಾತಿಯು ಕ್ರಮಕ್ರಮದಲ್ಲಿ ಪ್ರಗತಿಯನ್ನು ಹೊಂದುತ್ತ ಬಂದಿದೆ. ಈ ಸೌಕರ್ಯ ಇಲ್ಲದ್ದರಿಂದಲೇ ಮಾನವೇತರ ಪ್ರಾಣಿಗಳು ಪ್ರಗತಿಯನ್ನು ಹೊಂದದೆ ಸೃಷ್ಟಿಯ ಆದಿಯಲ್ಲಿ ಇದ್ದಂತೆಯೇ ಇಂದಿಗೂ ಇವೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಮಾತನಾಡುವ ಶಕ್ತಿ ಮನುಷ್ಯನಿಗಲ್ಲದೆ ಇನ್ನಾವ ಪ್ರಾಣಿಗೂ ಇಲ್ಲವೆಂಬುದು ಸೃಷ್ಟಿಯ ಒಂದು ಚಮತ್ಕಾರವಾಗಿದೆ.' ಆಲೋಚನೆ ಮಾಡುವ ಶಕ್ತಿ ಮಾನವನಲ್ಲಿ ಬಂದಾಗ ತನ್ನ ಕಾಲದ ಸಾಮಾಜಿಕ ರೀತಿ-ನೀತಿ, ಸಂಸ್ಕೃತಿ ಮತ್ತು ಕಂಡುಂಡ ಅನುಭವವೇದ್ಯವಾದ ಪಾಠವನ್ನು ಬಾಯಿಬಿಟ್ಟು ಪರರಿಗೆ ತಿಳಿಸಲೆತ್ನಿಸಿದಾಗ ಭಾಷೆ ಆವಿರ್ಭವಿಸುತ್ತದೆ. ಇಂಥ ಅನುಭವಗಳು ಮತ್ತು ಸಮಕಾಲೀನ ವಿದ್ಯಮಾನಗಳನ್ನು ಹಿಂದಿನವರು ತಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೇ ಅನಂತ ಕಾಲದವರೆಗೆ ತಿಳಿಸುವುದಕ್ಕಾಗಿ ಯತ್ನಿಸಿದಾಗ ಲಿಪಿ ಹುಟ್ಟಿಕೊಂಡಿತು. ಮೊದಮೊದಲು, ಸಂಕೇತಗಳು ಹಾಗೂ ಚಿತ್ರಗಳ ಮೂಲಕ ಕಲ್ಲು-ಬಂಡೆಗಳ ಮೇಲೆ ನಮೂದಿಸತೊಡಗಿದನು. ಕಾಲಾನಂತರ ಸುಧಾರಿತ ಲಿಪಿ ಪ್ರಾರಂಭವಾಯಿತು. ಪ್ರಾಚೀನ ಕಾಲದ ಮಾನವನ ಜ್ಞಾನದ ಅರಿವು ಹೆಚ್ಚಾದಂತೆ ಗಳಿಸಿದ ಜ್ಞಾನವನ್ನು ಯಾವುದಾದರೂ ರೀತಿಯಲ್ಲಿ ಮುಂದಿನ ಪೀಳಿಗೆಯವರಿಗೆ ಉಳಿಸಲು ಹೀಗೆ ಬರಹವೇ ಮುಖ್ಯ ಮಾಧ್ಯಮವಾಯಿತು’ ಎಂದಿದೆ.
©2024 Book Brahma Private Limited.