ಜಾನಪದ ವಿದ್ವಾಂಸರು, ಚಿಂತಕರು, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಸಂಶೋಧಕರು ತೀರ್ಥಪುರ ನಂಜುಂಡಯ್ಯ ಶಂಕರನಾರಾಯಣ. ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ 1947 ಸಪ್ಟೆಂಬರ್ 27. ‘ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು’ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಪರಿಸರ ವಿಜ್ಞಾನ, ಪಾರಾಮನೋವಿಜ್ಞಾನ, ಮಾನವ ವಿಜ್ಞಾನ, ಇತಿಹಾಸ, ರಾಜಕೀಯ ವಿಜ್ಞಾನ ಮುಂತಾದವುಗಳಲ್ಲಿ ಆಸಕ್ತರಾಗಿದ್ದು ಪದವಿ ತರಗತಿಗಳಿಗೆ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ವಿಮರ್ಶೆ, ತೌಲನಿಕ ಕಾವ್ಯ ಮೀಮಾಂಸೆ, ಛಂದಸ್ಸು, ಜಾನಪದ ವಿಜ್ಞಾನ ಮುಂತಾದ ವಿಷಯಗಳನ್ನು ಬೋಧಿಸಿದ್ದಾರೆ. ಹೀಗೆ ಸಾಹಿತ್ಯದ ಪ್ರಾಧ್ಯಾಪಕರಾಗಿ ಕನ್ನಡ ಕಾವ್ಯ ಮೀಮಾಂಸೆ, ವಿಮರ್ಶೆ, ಸಂಸ್ಕೃತಿಯ ಅಧ್ಯಯನವನ್ನು ಬೋಧಿಸಿದ್ದಾರೆ. ಜಾನಪದ ಅಧ್ಯಯನ ಹಾಗೂ ಸಂಗ್ರಹ, ಸಂಶೋಧನಾ ಕಾರ‍್ಯವನ್ನು ಮುಂದುವರೆಸಿಕೊಂಡು ಬಂದಿದ್ದು ಫಿನ್ ಲೆಂಡ್ ಜನಪದ ಮಹಾಕಾವ್ಯವಾದ ‘ಕಾಲೆವಾಲ’ ಮತ್ತು ಮಾನವ ಶಾಸ್ತ್ರದ ಅತಿ ಮಹತ್ವದ ಕೃತಿಯಾದ ಫ್ರೆಜರ್ ರವರ ‘ಗೋಲ್ಡನ್ ಬೊ’ ಎಂಬ ಎರಡು ಮೌಲಿಕ ಕೃತಿಗಳನ್ನು ಜನಪದ ಅಧ್ಯಯನ ನಿರತರಾಗಿರುವವರಿಗೆ ಕೃತಿಗಳ ಪರಿಚಯ ಮಾಡಿ ಕೊಟ್ಟಿದ್ದಾರೆ. ಅಲ್ಲದೆ ಜಾನಪದ ವಿಚಾರ, ಕಾಡು ಗೊಲ್ಲರು, ಕಾಡು ಗೊಲ್ಲರ ಸಂಪ್ರದಾಯ ಮತ್ತು ನಂಬಿಕೆಗಳು, ಜಾನಪದ ಮಹಾ ಕಾವ್ಯ, ಜಾನಪದ ಸಂಗ್ರಹ -ಸಂಪಾದನೆ, ಫಿನ್ಲೆಂಡಿನ ಜಾನಪದ ವಿದ್ವಾಂಸರು ಮೊದಲಾದ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜಾನಪದ ಸಂಶೋಧನೆ, ಸಾಹಿತ್ಯ ಕೃತಿ ರಚನೆಗಾಗಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯಿಂದ ಜಾನಪದ ತಜ್ಙ ಪ್ರಶಸ್ತಿ, ಜಾನಪದ ಸಮೀಕ್ಷೆ – ವಿಶ್ಲೇಷಣೆ ಗ್ರಂಥಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಕು.ಶಿ. ಹರಿದಾಸಭಟ್ ಸ್ಮಾರಕ ಪುಸ್ತಕ ಬಹುಮಾನ, ಫೋಕ್ ಲೋರ್ ಮ್ಯೂಸಿಯಂ ಗೈಡ್ ಕೃತಿಗೆ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ ಲಭಿಸಿದೆ. 2022 ಮೇ 11 ರಂದು ಮರಣ.