‘ಕರ್ನಾಟಕದ ಶಿಕ್ಷಣ ಪರಂಪರೆ’ ಕೃತಿಯು ಲೇಖಕಿ ಜ್ಯೋತ್ಸ್ನಾ ಕಾಮತ್ ಅವರು ಸಂಶೋಧನಾ ಗ್ರಂಥವಾಗಿದೆ. ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದ ಕಳೆದ ಶತಮಾನದವರೆಗೆ ಶಿಕ್ಷಣ ಕ್ರಮ ಏನಿದ್ದಿತು? ಯಾವ ಯಾವ ವಿಷಯಗಳಲ್ಲಿ ಶಿಕ್ಷಣ? ಧಾರ್ಮಿಕ ವ್ಯಾಸಂಗ, ಸೈನಿಕ ತರಬೇತಿ, ವೃತ್ತಿ ಪರ ಶಿಕ್ಷಣ ಮುಂತಾದ ಅಂಶಗಳಲ್ಲಿ ಅದಾವ ಪರಂಪರೆ ಇದ್ದಿತು? ಮಕ್ಕಳು-ಪ್ರೌಢರು, ಸ್ತ್ರೀಯರು, ಅನ್ಯ ಮತಗಳವರು ಎಂಬ ತಾರತಮ್ಯವನ್ನು ಯಾವ ರೀತಿಯಲ್ಲಿ ಪಾಲಿಸಲಾಗುತ್ತಿತ್ತು? ಇದೊಂದು ದೀರ್ಘ ಸಂಶೋಧನೆಯ ವಿಷಯವೇ. ಆದರೆ ಸರಾಗವಾಗಿ ಓದಿಸಿಕೊಂಡು ಹೋಗುವ ರೀತಿಯಲ್ಲಿ ಇಲ್ಲಿಯ ನಿರೂಪಣೆ ಇದೆ. ವಿಷಯವು ಚೆನ್ನಾಗಿ ವೇದ್ಯವಾಗಬೇಕೆನ್ನುವ ದೃಷ್ಟಿಯಿಂದ ಚಿತ್ರಗಳನ್ನು ಸೇರಿಸಲಾಗಿದೆ. 103 ವಿಚಾರ ಪ್ರಧಾನವಾದ 130 ಪುಟಗಳ ಪುಸ್ತಕಕ್ಕೆ ಇಷ್ಟೊಂದು ಚಿತ್ರಗಳನ್ನು ಸೇರಿಸ ಲಾಗಿದೆ. ಪ್ರತಿಯೊಂದು ಚಿತ್ರವೂ ನಮ್ಮ ಶಿಕ್ಷಣ ಕ್ರಮವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. ಈ ಚಿತ್ರಗಳಿಂದಾಗಿಯೂ ಸುಭಗವಾದ ವಿವರಣೆಯಿಂದಾಗಿಯೂ ಈ ಕೃತಿಯು, ಸಾಮಾನ್ಯ ವಿದ್ಯಾವಂತರಿಗೂ ಶಿಕ್ಷಣ ವೃತ್ತಿಪರರಿಗೂ ಪ್ರಯೋಜನಕಾರಿಯಾಗಿದೆ.
©2024 Book Brahma Private Limited.