’ಚರಿತ್ರೆ ದರ್ಶನ ಮತ್ತು ಸಂಶೋಧನಾ ಮಾರ್ಗ’ ಎಚ್. ಪರಮೇಶ್ವರ ಅವರ ಕೃತಿಯಾಗಿದೆ. "ಜಾಗತೀಕರಣದಂತಹ ಪರಿಸ್ಥಿತಿಯೊಳಗೆ ನಿಂತು ಮನುಷ್ಯ ಜೀವನದ ಯಶೋಗಾಥೆಗಳನ್ನು ಮಾತೃ ಭಾಷೆಯಲ್ಲಿಯೇ ಅರ್ಥೈಸುವ ಮತ್ತು ಕಟ್ಟುವ ಚರಿತ್ರೆಯ ಕೃಷಿ ಚಟುವಟಿಕೆಗಳು ಸರಳ ಸುಲಭವಲ್ಲ. ಚರಿತ್ರೆ ಎಂದರೆ, ಸ್ಪಷ್ಟವಾಗಿ ಇಂಥದ್ದೇ ಎನ್ನುವುದಕ್ಕೆ ಬದಲಾಗಿ ಅದು ಹಿಂದೆ ನಡೆದಿರಬಹುದಾದ ಘಟನೆಗಳ ಬಗೆಗೆ ನಮಗಿರುವ ಜ್ಞಾನ ಎಂಬ ತಿಳಿವಳಿಕೆ ಬಹು ಮುಖ್ಯ. ಚರಿತ್ರೆ ಎಂದರೇನು? ಹಿಂದಿನ ರಾಜರ ಕತೆಗಳನ್ನೇ ಮತ್ತೆ ಮತ್ತೆ ಹೇಳುವುದು, ಅದೇನು ಬದಲಾಗುತ್ತದೆಯೇ? ಅದೇ ಅಶೋಕ, ಅದೇ ಅಕ್ಟರ್. ಇವೆಲ್ಲವೂ ಧ್ವನಿ ಸುರುಳಿಗಳ ಶ್ರವಣ ಎಂದು ಲೇವಡಿ ಮಾಡುವ ಜನರಿದ್ದಾರೆ. ಇವರಿಗೆ ಚರಿತ್ರೆ ಒಂದು ಬದಲಾಗುವ ಅಪೂರ್ಣ ಜ್ಞಾನ: ನಾವೀಗ ತಿಳಿದದ್ದು ಹಿಂದಿನವರಿಗೆ ತಿಳಿದಿರಲಿಲ್ಲ; ನಮಗೀಗ ತಿಳಿಯದ್ದು ಮುಂದಿನವರು ತಿಳಿದಾರು ಎಂಬ ಅರಿವಿಲ್ಲ. ಚರಿತ್ರೆ ಬಲು ಪ್ರಾಚೀನ ಮತ್ತು ಅಮೋಘವಾಗಿದೆ. ಬಹುತೇಕ ಮಹನೀಯರ ಚಾರಿತ್ರಿಕ ಜ್ಞಾನ ಇತ್ತೀಚಿನದು ಎಂದು ತಿಳಿದಿಲ್ಲ. ಅನೇಕ ಭಾರತೀಯರು ಐರೋಪ್ಯರ ಸಂಪರ್ಕದಿಂದಾಗಿ ಚರಿತ್ರೆ ಒಂದು ಅಧ್ಯಯನ ವಿಷಯವಾಯಿತೆಂದು ಭಾವಿಸಿದ್ದಾರೆ" ಎಂದು ಲೇಖಕರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. ಈ ನಿಲುವು ಅವರ ಈ ಕೃತಿಯ ಹಿಂದಿನ ಪ್ರೇರಣೆಯಾಗಿದೆ ಮತ್ತು ಹೊಸದೇ ತಿಳುವಳಿಕೆಯನ್ನು ಇತಿಹಾಸ ಕುರಿತಂತೆ ಹೊಳೆಯಿಸುತ್ತದೆ.
©2024 Book Brahma Private Limited.