ಹಿರಿಯ ಕವಿಯೊಬ್ಬ ಕಿರಿಯ ಕವಿಗೆ ಬರೆದ ಪತ್ರಗಳ ಗುಚ್ಛ ಎಂದು ಮೇಲ್ನೋಟಕ್ಕೆ ಕಂಡರೂ ಕೃತಿ ಆ ಚೌಕಟ್ಟನ್ನು ಮೀರಿ ನಿಲ್ಲುತ್ತದೆ. ಹೇಳಿಕೆಯಂತೆ ತೋರಿದರೂ ಕವಿತೆಯ ಕಲಾತ್ಮಕತೆ ರಿಲ್ಕ್‌ನ ಮಾತುಗಳಲ್ಲಿದೆ. ಕವಿಯೊಬ್ಬನ ಅಂತರಂಗವನ್ನು ಬಿಚ್ಚಿಡುವ ಕೃತಿ ಯುವಕವಿಗಳಿಗೆ ಪಾಠ, ಈಗಾಗಲೇ ಬೆಳೆದ ಕವಿಗಳಿಗೆ ಪಠ್ಯದಂತೆ ತೋರುತ್ತದೆ!
'ಗೆಳೆಯಾ, ನಿನ್ನ ಏಕಾಂತವನ್ನು ಪ್ರೀತಿಸು, ಏಕಾಂತವು ನಿನಗೆ ನೀಡುವ ನೋವನ್ನು ಹಾಡನ್ನಾಗಿ ಮಾಡು...' ಎಂದು ತನ್ನ ಕಿರಿಯ ಸಂಗಾತಿಗೆ ಕರೆ ನೀಡುತ್ತಾನೆ ರಿಲ್ಕ್. ಇದು ಮಾತೂ ಹೌದು ಕವಿತೆಯೂ ಹೌದು. ಇದು ಒಬ್ಬನನ್ನು ಉದ್ದೇಶಿಸಿ ಹೇಳಿದ್ದೂ ಹೌದು, ಇಡೀ ಕಾವ್ಯ ಜಗತ್ತನ್ನು ಕುರಿತು ಹೇಳಿದ್ದೂ ಹೌದು.
ಹಿರಿಯ ವಿಮರ್ಶಕ ಓ.ಎಲ್. ನಾಗಭೂಷಣಸ್ವಾಮಿ ಅವರು ಅನುವಾದಿಸಿರುವ ಕೃತಿ ಅನೇಕ ಕಾರಣಗಳಿಗೆ ಕನ್ನಡ ಜಗತ್ತಿಗೆ ಸ್ಫೂರ್ತಿ ಒದಗಿಸುತ್ತಿದೆ. ಕಾವ್ಯವನ್ನು ಹೊಕ್ಕಾಡುವವರೆಲ್ಲರೂ ಓದಲೇಬೇಕಾದ ಕೃತಿ ಇದು.
ಮುತ್ತಿನಂತಿರುವ ರಿಲ್ಕನ ಇನ್ನೊಂದು ಮಾತು ಹೀಗಿದೆ: "ಆಗಾಧವಾಗಿರಬೇಕು ಈ ಮೌನ, ಸದ್ದುಗಳಿಗೆ, ಚಲನೆಗಳಿಗೆ ಅವಕಾಶವಿರುವ ಮೌನ; ದೂರದ ಸಮುದ್ರದ ಮೊರೆತವೂ ಕೇಳುವ ಮೌನ ಇತಿಹಾಸ ಪೂರ್ವ ಕಾಲದ ಸಾಮರಸ್ಯದ ಸ್ವರಗಳು ಕೇಳಿಸುವ ಮೌನ, ಈ ಅದ್ಭುತವಾದ ಏಕಾಂತವು ಸ್ನ ಮೇಲೆ ವರ್ತಿಸುವುದಕ್ಕೆ ನೀನು ಸಮಾಧಾನದಿಂದ, ವಿಶ್ವಾಸದಿಂದ ಅವಕಾಶ ಮಾಡಿಕೊಟ್ಟಿರುವೆ ಎಂದು ಆಶಿಸುತ್ತೇನೆ. ಈ ಏಕಾಂತವು ನಿನ್ನ ಬದುಕಿನಿಂದ ಅಳಿಸಿ ಹೋಗದಿರಲಿ; ನೀನು ಅನುಭವಿಸಬೇಕಾದ, ಮಾಡಬೇಕಾದ ಎಲ್ಲವೂ ಅಜ್ಞಾತ ಪ್ರಭಾವವಾಗಿ, ನಮ್ಮ ಬದುಕಿನ ಒಂದೊಂದು ತಿರುವಿನಲ್ಲೂ ನಮ್ಮ ರಕ್ತದಲ್ಲೇ ಬೆರೆತಿರುವ ನಮ್ಮ ಪ್ರಾಚೀನರ ರಕ್ತದ ಹಾಗೆ, ನಿರಂತರವಾಗಿ, ಮೃದುವಾಗಿ ಮಾಡುತ್ತದೆ, ಮತ್ತೆ ಸಾಹಿತ್ಯವೆಂದು ಕರೆಯಲಾಗುವ ಮುಕ್ಕಾಲು ಭಾಗ ಕೂಡ ಹೀಗೆ ಮಾಡುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಇಂಥ ಆರೆ ಕಲಾತ್ಮಕ ಉದ್ಯೋಗಕ್ಕೆ ಸೇರುವ ಬದಲಾಗಿ ನೀನು ಏಕಾಂಗಿಯಾಗಿ, ಧೈರ್ಯವಾಗಿ ಒಡ್ಡು ವಾಸ್ತವವನ್ನು ಎದುರಿಸುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ.’
©2024 Book Brahma Private Limited.