‘ಕಥೆ ಮತ್ತು ಹಾಡು’ ಕೃತಿಯು ಕರೀಗೌಡ ಬೀಚನಹಳ್ಳಿ ಅವರ ಅನುವಾದಿತ ಕೃತಿಯಾಗಿದೆ. ಕೃತಿಯ ಕುರಿತು ಎಚ್.ಜೆ. ಲಕ್ಕಪ್ಪಗೌಡ ಅವರು, ಕನ್ನಡ ಸಾಹಿತ್ಯ ಆರಂಭ ಕಾಲದಿಂದಲೂ ತನ್ನ ಬಹುಭಾಗದ ಭಾಷೆ ಮತ್ತು ಸಾಹಿತ್ಯ ಪ್ರಕ್ರಿಯೆಗೆ ಜನಭಾಷೆಯನ್ನು ಸಹಜವಾಗಿಯೇ ಉಸಿರು ಮಾಡಿಕೊಂಡರೆ, ಸಂಸ್ಕೃತ, ಪ್ರಾಕೃತ ಮತ್ತು ಇತರ ಭಾರತೀಯ ಭಾಷೆಗಳಿಂದ ವಸ್ತು, ಭಾಷೆ, ರೂಪ, ತಂತ್ರ ಮುಂತಾದವುಗಳನ್ನು ಸಂಕೋಚವಿಲ್ಲದ ಬಳಸಿಕೊಂಡು, ಅವುಗಳೆಲ್ಲಕ್ಕೂ ಕನ್ನಡತನದ ರೂಪ ಮತ್ತು ಸ್ವರೂಪ ಗಳನ್ನು ಅಳವಡಿಸಿಕೊಂಡು ವ್ಯಾಪಕವಾಗಿ ಮತ್ತು ಸಮೃದ್ಧವಾಗಿ ಬೆಳೆಯುತ್ತಾ ಬಂದಿದೆ. ವಸಹಾತುಶಾಹಿ ಸಂದರ್ಭದಲ್ಲಿ ಮುಖ್ಯವಾಗಿ ಇಂಗ್ಲಿಷ್ ನಿಂದ ಮತ್ತಿತರ ಯುರೋಪಿಯನ್ ಭಾಷೆಗಳಿಂದ ವಿಶಿಷ್ಟವಾದ ಕೃತಿಗಳನ್ನು ಆಯ್ದು ರೂಪಾಂತರಿಸಿಕೊಳ್ಳುವ, ಅನುವಾದಿಸುವ ಪ್ರಕ್ರಿಯೆಯನ್ನು ನಮ್ಮ ನೂರಾರು ಲೇಖಕರು ಮುಂದುವರಿಸಿದರು. ಇದರಿಂದ ಜಗತ್ಸಾಹಿತ್ಯದ ಹಲವು ಉತ್ಕೃಷ್ಟ ಕೃತಿಗಳು ಕನ್ನಡಕ್ಕೆ ದೊರೆತವು, ಕನ್ನಡ ಓದುಗರಿಗೆ ಇದು ಜಗತ್ತಿನ ಸಾಹಿತ್ಯ ಲೋಕದ ಅರಿವನ್ನು ಪಡೆದುಕೊಳ್ಳಲು ಹೊಸ ಮಾರ್ಗವೊದನ್ನು ತರೆಯಿತು. ಹಾಗೆಯೇ ಕನ್ನಡ ಲೇಖಕರಿಗೆ ಸಾಹಿತ್ಯದ ಹೊಸ ಹೊಸ ಮಾರ್ಗಗಳು ಪರಿಚಯವಾಗಿ ತಮ್ಮ ಕೃತಿಗಳ ಅನನ್ಯತೆಯನ್ನು ಅಭಿವರ್ಧಿಸಿಕೊಳ್ಳಲು ಸಹಾಯಕವಾಯಿತು. ಆದರೆ, ಅನ್ಯಭಾಷೆಗಳಿಂದ ಕನ್ನಡಕ್ಕೆ ಬಂದಿರುವ ಕೃತಿಗಳ ಸಂಖ್ಯೆ ಮತ್ತು ಮೌಲಿಕತೆಯನ್ನು ವಿಶ್ಲೇಷಿಸಿದಾಗ ಕನ್ನಡದಿಂದ ಅನ್ಯಭಾಷೆಗಳಿಗೆ ಅನುವಾದಗೊಂಡು ಆ ಲೇಖಕರನ್ನು ಪ್ರಭಾವಿಸಿದ ಕೃತಿಗಳ ಸಂಖ್ಯೆ ಬಹಳ ಕಡಿಮೆ ಎಂಬುದು ಗಾಢ ವಿವಾದವನ್ನು ತರುವ ಅಂಶವಾಗಿದೆ. ಭಾಷಾಂತರದ ಈ ಅನಿವಾರ್ಯ ಪ್ರಕ್ರಿಯೆ ಭಾಷೆಯನ್ನು ಮಾಧ್ಯಮವಾಗುಳ್ಳ ಎಲ್ಲ ಪ್ರಕಾರಗಳನ್ನು ಸಮೃದ್ಧಿಸುವ, ಸಮುಜ್ವಲಗೊಳಿಸುವ ಅಪೇಕ್ಷಣೀಯ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.
©2024 Book Brahma Private Limited.