ಕೆ.ನಲ್ಲತಂಬಿ ಅವರು ಇಷ್ಟವಾಗುವುದೇ ಅವರ ಪ್ರತಿ ಕತೆಗಳಲ್ಲಿನ ಪರಿಪುಷ್ಟ ರೊಮ್ಯಾಂಟಿಕ್ ಅನುಭವಗಳಿಂದ. ಅವರು ಸೃಜಿಸುವ ಪಾತ್ರಗಳು ಕಲ್ಪನೆಯೂ, ಸಹಜವೂ ಎಂಬಂತೆ ಅನುಭವ ಮೂಡಿಸಿ ವಾಸ್ತವದಲ್ಲಿದ್ದುಕೊಂಡೇ ಪ್ರಾಮಾಣಿಕವಾಗಿ ಓದುಗರೊಂದಿಗೆ ತಮ್ಮನ್ನು ತೆರೆದುಕೊಳ್ಳುತ್ತವೆ. ಅಷ್ಟೇ ನಿಷ್ಕಲ್ಮಷವಾಗಿ ತಮ್ಮ ಭಾವನೆಗಳನ್ನು ನಿವೇದಿಸಿಕೊಳ್ಳುತ್ತವೆ. ಅದರಿಂದ ಓದುಗರ ಮನಸ್ಸು ಬದುಕಿನ ಮಧುರ ನೆನಪುಗಳ ಏಕತಾನತೆಯ ಕಡೆಗೆ ಜಾರುತ್ತದೆ. ಅವರ ಕತೆಗಳಲ್ಲಿನ ಪಾತ್ರಗಳ ರಂಜನೆ ಅತಿಶಯೋಕ್ತಿ ಎನಿಸುವುದಿಲ್ಲ; ಕಥಾನಿರೂಪಣೆ ಪಾದರಸದಷ್ಟೇ ಚುರುಕು. ಆಯಾ ಕತೆಗಳ ಹಿನ್ನೆಲೆ, ಕತೆ ಘಟಿಸುವ ಸ್ಥಳಗಳನ್ನು ಅಷ್ಟೇ ಸುಂದರವಾಗಿ ಅವರ ನಿರೂಪಣೆಯಲ್ಲಿ ಚಿತ್ರಿಸುತ್ತಾರೆ. ಕೆಲವೊಮ್ಮೆ ನಾವು ಕಂಡ ಜಗತ್ತೇ ನಲ್ಲತಂಬಿ ಅವರ ಕಕ್ಷೆಯಲ್ಲಿ ಕೌತುಕ ಹುಟ್ಟಿಸಿ ಹೊಸ ವೇಷ ತೊಟ್ಟು ನಮಗೆ ಗೋಚರವಾಗುತ್ತದೆ. ಅವರ ಕ್ಯಾಮೆರಾ ಕಣ್ಣುಗಳು ಅಷ್ಟು ಸೃಜನಶೀಲ ಮತ್ತು ಸುಂದರ! ಪ್ರಸ್ತುತ ಲೋಕರೂಢಿ ವ್ಯಾಪಾರ ಸಂಬಂಧಗಳಲ್ಲಿನ ಅನೇಕ ಸೂಕ್ಷ್ಮವಿಚಾರಗಳು ಈ ಸಂಕಲನದ ಕಥಾವಸ್ತುಗಳಾಗಿವೆ. ಅದನ್ನು ಸಮಕಾಲೀನತೆಯ ಏಕಾವಳ ಎಂದು ಬಣ್ಣಿಸಬಹುದು. ಕೆ.ನಲ್ಲತಂಬಿ ಅವರು ಕನ್ನಡ ಮತ್ತು ತಮಿಳು ಈ ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಬರೆಯುವ ನಿಷ್ಣಾತರು. ಅನುವಾದ ಅವರ ಬರವಣಿಗೆಯ ಭಾಗವಾಗಿದ್ದರೂ ಅವರ ಕತೆ, ಕವಿತೆಗಳು ಕಾರ್ಮಿಂಚಿನಂತೆ ಆಗಾಗ ಓದುಗರನ್ನು ಬೆರಗುಗೊಳಸುತ್ತಲೇ ಇರುತ್ತವೆ. ಅದೇ ಅವರ ಗೈರತ್ತು. ಈ ಸಂಕಲನದ ಎಲ್ಲ ಕತೆಗಳು ಉಭಯ ಭಾಷೆಗಳಲ್ಲಿ ಅವರಿಂದ ರಚನೆಯಾಗಿ, ಈ ರಾಜ್ಯಗಳ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಈಗಾಗಲೇ ಅವರ ಕರ್ತೃತ್ವದ ಹಿರಿಮೆ, ಅನುವಾದದ ಚಿಲುಮೆ ಎರಡು ರಾಜ್ಯಗಳಲ್ಲಿ ಪಸರಿಸಿದೆ. ಅವರ ಕತೆಗಳ ಪಾತ್ರ ವೈಶಿಷ್ಟ್ಯತೆಯು ದಕ್ಷಿಣ ಭಾರತದ ಹಲವು ಸಂಸ್ಕೃತಿಗಳ ಸಮ್ಮಿಲನದಂತೆ ಕಾಣುತ್ತದೆ ಎಂದು ಶ್ರೀಧರ ಬನವಾಸಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.