ಖಲೀಲ್ ಗಿಬ್ರಾನ್ ಅವರ ಕೃತಿಯನ್ನು ದೇವದತ್ತ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕ್ರಿಸ್ತನು ಜಗತ್ತಿನ ಅವತಾರಿಕ ಪುರುಷರಲ್ಲೊಬ್ಬ ಇಂಥವರ ಮಹಾ ಜೀವನವನ್ನು ವಸ್ತುವಾಗಿಸಿಕೊಂಡು ಹುಟ್ಟಿದ ಕೆಲವೇ ಮಹೋನ್ನತ ಕೃತಿಗಳಲ್ಲಿ ಗಿಬ್ರಾನ್ ಅವರ ಈ ಕೃತಿಯೂ ಒಂದು.
ಪ್ರವಾದಿ ಎಂಬ ಗಿಬ್ರಾನನ ಕೃತಿಯಲ್ಲಿ ಜಗತ್ತನ್ನು ಓರ್ವ ಮಹಾ ಪುರುಷನ ದೃಷ್ಟಿಕೋನದಿಂದ ನೋಡಿದ ಹವಣಿಕೆ ಇದೆ. ’ಮಾನವಪುತ್ರ ಜೀಸಸ” ಕೃತಿಯಲ್ಲಿ ಓರ್ವ ಮಹಾಪುರುಷನ ಜೀವನವನ್ನು ಜಗತ್ತಿನ ವಿವಿಧ ದೃಷ್ಟಿಕೋನಗಳಿಂದ ನೋಡಿದ ಉಪಕ್ರಮವಿದೆ.
ಕ್ರಿಸ್ತನ ಅನೇಕ ಶಿಷ್ಯರು ಬರೆದ ಚರಿತ್ರೆಗಳು ಉಪಲಬ್ಧವಾಗಿವೆ. ಜ್ಯೂ ಜನಾಂಗದ ಇತಿಹಾಸವೆಲ್ಲ ಪುರಾತನ ಉಲ್ಲೇಖನದಲ್ಲಿ ಸಂಗ್ರಹಿತವಾಗಿದೆ. ಆದರೆ, ಪರಂಪರೆಯೂ ಧರ್ಮಾಂಧತೆಯೂ ಬೆಳೆದು ಬಂದ ಕ್ರಿಸ್ತ ಧರ್ಮದ ಆಡಂಬರದಲ್ಲಿ ಕ್ರಿಸ್ತನೇ ಮುಚ್ಚಿಹೋಗಿದ್ದಾನೆ. ಗಿಬ್ರಾನನು ಈ ಎಲ್ಲ ಆವರಣಗಳನ್ನು ಬದಿಗೆ ಸರಿಸಿದ. ಕ್ರಿಸ್ತನ ದಿವ್ಯ ವ್ಯಕ್ತಿತ್ವವನ್ನು ಎದುರಿಗಿರಿಸಿಕೊಂಡು ಅದರ ಶುದ್ಧ ಚಿತ್ರಣಕ್ಕಾಗಿ ಇದ್ದ ಸಾಮಗ್ರಿಯನ್ನೆಲ್ಲ ಉಪಯೋಗಿಸಿದ. ಆ ಮಹತ್ವದ ಕೃತಿಯನ್ನು ದೇಸಾಯಿ ದೇವದತ್ತರು ಅಷ್ಟೇ ಸೂಕ್ಷ್ಮವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.