ಜರ್ಮನ್ ಮನಃಶಾಸ್ತ್ರಜ್ಞನಾದ ಎರಿಕ್ ಫ್ರಾಂ ನ ಕೃತಿ ’ ಆರ್ಟ್ ಆಫ್ ಲಿವಿಂಗ್’ ನ ಕನ್ನಡ ಅನುವಾದವನ್ನು ವಿಮರ್ಶಕರೂ, ಲೇಖಕರೂ ಆದ ಡಾ. ಕೆ.ವಿ ನಾರಾಯಣ ಮತ್ತು ಎಚ್. ಎಸ್. ರಾಘವೇಂದ್ರ ರಾವ್ ಅವರು ’ಪ್ರೀತಿಸುವುದೆಂದರೆ…’ ಎಂಬ ಶೀರ್ಪಿಕೆಯಡಿ ಹೊರತಂದಿದ್ದಾರೆ.
ಪ್ರೀತಿ ಎಂಬುದು ತಾನೇ ತಾನಾಗಿ ಹುಟ್ಟುವುದಿಲ್ಲ; ಅದಕ್ಕೆ ಶಿಸ್ತು, ಏಕಾಗ್ರತೆ, ಶಾಂತಿ, ಸಹನೆ ಬೇಕು. ಪ್ರೀತಿ ಎಂಬುದು ಭಾವನೆಯಲ್ಲ; ಅದೊಂದು ಆಚರಣೆ ಎಂಬ ನಿಲುವನ್ನು ತನ್ನ ಕೃತಿಯ ಮೂಲಕ ತಿಳಿಸಿದ ಎರಿಕ್ ಫ್ರಾಂ ತನ್ನ ಮನಃಶಾಸ್ತ್ರದ ನಿಲುವನ್ನು, ತತ್ವವನ್ನು, ಮನೋಸಿದ್ದಾಂತದ ಮಾರ್ಗದಲ್ಲೇ ಪ್ರಸ್ತುತಪಡಿಸಿದನು.
ಬೇರೆಯವರನ್ನು ಪ್ರೀತಿಸುವ ಮುನ್ನ ನಮ್ಮನ್ನು ನಾವು ಪ್ರೀತಿಸುವುದನ್ನು ಕಲಿಯಬೇಕು. ನಮ್ಮ ಮನವನ್ನು ಮುಕ್ತವಾಗಿಟ್ಟುಕೊಳ್ಳಬೇಕು. ಎಲ್ಲದಕ್ಕೂ ಲೆಕ್ಕಾಚಾರ ಹಾಕುವುದರ ಬದಲು ಮುಗ್ಧತೆಯನ್ನು ಕಾಯ್ದುಕೊಳ್ಳಬೇಕು. ಆತ್ಮೀಯತೆ, ಗೌರವ ಮತ್ತು ಜ್ಞಾನವನ್ನು ಬೆಳೆಸುವುದೇ ಪ್ರೀತಿ ಎಂಬ ಆಶಯವನ್ನು ತಿಳಿಸುವ ಕೃತಿ ’ಪ್ರೀತಿಸುವುದೆಂದರೆ…..’
ಪ್ರೀತಿ ಒಂದು ಕಲೆಯೇ, ಪ್ರೀತಿ ಮೀಮಾಂಸೆ, ಪ್ರೀತಿಯ ವಸ್ತುಗಳು, ಸಮಕಾಲೀನ ಪಾಶ್ಚಾತ್ಯ ಸಮಾಜದಲ್ಲಿ, ಪ್ರೀತಿ ಮತ್ತು ಅದರ ವಿಘಟನೆ, ಪ್ರೀತಿಯ ಅನುಷ್ಠಾನ ಮೊದಲಾದ ವಿಷಯಗಳ ಪ್ರಸ್ತಾಪದ ಜೊತೆಯಲ್ಲಿ ಎರಿಕ್ ಫ್ರಾಂನ ಜೀವನದ ಮುಖ್ಯ ಘಟನೆಗಳು, ಎರಿಕ್ ಫ್ರಾಂನ ಪ್ರಕಟಿತ ಕೃತಿಗಳು(ಇಂಗ್ಲಿಷ್ ನಲ್ಲಿ) ಇವುಗಳ ಸಂಕ್ಷಿಪ್ತ ಮಾಹಿತಿಯನ್ನೂ ಈ ಕೃತಿಯಲ್ಲಿ ನೀಡಲಾಗಿದೆ.
©2024 Book Brahma Private Limited.