'ಸಾಂಗತ್ಯ' (ಒಲವಿಗಾಗಿ ಹೆಣ್ಣಿನ ಹಂಬಲ) ಕೃತಿಯು ಅಮೆರಿಕಾ ಲೇಖಕಿ ಬೆಲ್ ಹುಕ್ಸ್ ಕೃತಿಯ ಕನ್ನಡಾನುವಾದ. ಲೇಖಕಿ ಮಹಿಳಾಪರ ಚಿಂತಕಿ ಎಚ್.ಎಸ್. ಶ್ರೀಮತಿ ಅವರು ಕನ್ನಡೀಕರಿಸಿದ್ದಾರೆ. ಐ ಲವ್ ಯೂ ನಾವು ಪ್ರೀತಿಸುವ ಹಲವರು ನಮ್ಮ ಬದುಕಿನಲ್ಲಿ ಇರುತ್ತಾರೆ. ಆದರೆ ಇವರೆಲ್ಲರಿಗೂ ನಾವು ಐ ಲವ್ ಯೂ ಎಂದು ಹೇಳುವುದಿಲ್ಲ. ಗಂಡು-ಹೆಣ್ಣುಗಳ ಸಂಬಂಧದಲ್ಲಿ, ವಿಶೇಷವಾಗಿ ಇಬ್ಬರ ನಡುವಣ ಲೈಂಗಿಕ ಸಂಬಂಧದ ಸೂಚಕವಾಗಿ, ಮಾತ್ರ ಈ ʼಪ್ರೀತಿಸುತ್ತೇನೆʼಎಂಬ ಮಾತನ್ನು ಸಲೀಸಾಗಿ ಬಳಸಿ ಬಿಡುತ್ತೇವೆ. ಹಾಗೆ ನೋಡಿದರೆ ಇದೊಂದು ಆಧುನಿಕ ಪರಿಭಾಷೆ. ಹಾಗೆಂದು ಈ ಭಾವನೆಯೇ ಆಧುನಿಕ ಎಂದಲ್ಲ. ಲವ್ ಯೂ ಎಂಬ ಮಾತು ಮಾತ್ರ, ವಿಕ್ಟೋರಿಯನ್ ಯುಗದ ರೊಮಾಂಟಿಕ್ ಅಭಿವ್ಯಕ್ತಿಯ ನಕಲು ಎಂದರೂ ಆದೀತು. ನಮ್ಮಲ್ಲೂ ಅಷ್ಟಿಷ್ಟು ಶಿಕ್ಷಣಕ್ಕೆ, ಅಥವಾ/ಮತ್ತು ಆಧುನಿಕತೆಗೆ ತೆರೆದುಕೊಂಡ, ಹೆಣ್ಣು/ಗಂಡುಗಳು ಐ ಲವ್ ಯೂ ಎಂದರೆ, ಅದಕ್ಕೆ ಲೈಂಗಿಕ ಸಂಬಂಧದ ಆಸೆ ಎಂದೇ ಅರ್ಥ ಇರುವುದು. ಹಾಗಾದರೆ, ವಿಶಾಲವ್ಯಾಪ್ತಿಯ ಪ್ರೀತಿ, ಲವ್ ಎಂಬ ಪದವನ್ನು ಇದೊಂದೇ ಅರ್ಥಕ್ಕೆ ನಾವು ಕಟ್ಟಿಹಾಕಿರುವ ಅರಿವು ನಮಗೆ ಕಿಂಚಿತ್ತೂ ಇಲ್ಲದೆ ಹೋದದ್ದು ಹೇಗೆ? ಐ ಲವ್ ಯೂ ಎಂದು ಹೇಳಿಕೊಂಡ ಗಂಡು ಮತ್ತು ಹೆಣ್ಣುಗಳು, ಪರಸ್ಪರ ಒಪ್ಪಿಕೊಂಡೇ ಒಂದಾಗಿ ಬಾಳಲು ನಿರ್ಧರಿಸಿದರು ಎನ್ನೋಣ. ಆ ನಂತರದಲ್ಲಿ, ಅವರು ಪರಸ್ಪರ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ. ಪರಸ್ಪರ ಪ್ರೀತಿ, ಒಪ್ಪಿಗೆ ಎಂಬ ಹಿನ್ನೆಲೆ ಇದ್ದರೂ, ಆ ಮಹಿಳೆಯು, ಯಾವುದೇ ಒತ್ತಡವಿಲ್ಲ ಎಂದರೂ, ತನ್ನನ್ನು ಅವನಿಗೆ ಒಪ್ಪಿಸಿಕೊಳ್ಳುವುದು ಎಂದು ಸ್ವತಃ ತನಗೆ ತಾನೇ ತಿಳಿದು ಬಿಡುತ್ತಾಳೆ; ಹಾಗೆಯೇ ಆ ಪುರುಷನು ಹೆಣ್ಣನ್ನು ಪ್ರೀತಿಸುವುದು ಎಂದರೆ ಅವಳನ್ನು ಸಾಕಿ-ಸಲಹಿ, ರಕ್ಷಿಸಬೇಕಾದ ಕೆಲಸ ಎಂದು ತಿಳಿಯುತ್ತಾನೆ. ಇಷ್ಟು ನಿಯಮವಾದರೂ ಅಲ್ಲಿ ಸರಿಯಾಗಿ ಪಾಲನೆ ಆಗುತ್ತದೆಯೇ ಎಂದರೆ, ಅದೂ ಆಗುವುದಿಲ್ಲ. ತನ್ನನ್ನು ತಾನು ಒಪ್ಪಿಸಿಕೊಂಡ ಆ ಹೆಣ್ಣು ಅವನ ಸೇವೆಗೆ ನಿಗದಿತವಾದರೆ, ಆ ಗಂಡು ಅವಳ ದೈನಿಕ ಅಗತ್ಯಗಳನ್ನು ಪೂರೈಸುವ ನೆಪದಲ್ಲಿ, ಅವಳ ಮೇಲೆ ಹಕ್ಕನ್ನು ಸಾಧಿಸುತ್ತಾನೆ. ಅಂದರೆ, ಪ್ರೀತಿ ಎಂದರೆ, ಲೈಂಗಿಕ ಸಂಬಂಧದ ಒಪ್ಪಂದ ಎಂಬ ಒರಟು ಅರ್ಥವು ಕೂಡಾ ಅಲ್ಲಿ ನ್ಯಾಯಯುತವಾಗಿ ಅನ್ವಯಿಸುವುದಿಲ್ಲ. ಅವನ ಲೈಂಗಿಕ ಅಗತ್ಯಗಳಿಗೆ ಅವಳು ಒದಗಬೇಕು ಎಂಬ ನಿಯಮ ಇರುತ್ತದೆಯೇ ಹೊರತು, ಅವಳ ಲೈಂಗಿಕ ಅಗತ್ಯಗಳ ಪ್ರಸ್ತಾಪವೂ ಅಲ್ಲಿ ಬರುವುದಿಲ್ಲ. ಅದೂ ಹೊಗಲಿ ಎಂದರೆ, ಅವನು ಅವಳ ಊಟ ವಸತಿಗಳಂತಹ ಮೂಲಭೂತ ದೈನಿಕ ಅಗತ್ಯಗಳನ್ನು ಪೂರೈಸದೆ ಹೋದರೂ, ಅವಳ ಮೇಲೆ ಅವನಿಗೆ ಅಧಿಕಾರ ಇದ್ದೇ ಇರುತ್ತದೆ. ಆದರೆ ಅವಳಿಗೆ ಮಾತ್ರ ಅವನಿಂದ ಏನೊಂದೂದಕ್ಕದೆ ಇದ್ದಾಗಲೂ, ಅವನ ಮನೆ, ಅವನ ಮಕ್ಕಳು ಎಂಬ ಸೇವೆಗಳಿಂದ ಮುಕ್ತಿ ಇರುವುದಿಲ್ಲ;ಜೊತೆಗೆ, ತನ್ನ ಲೈಂಗಿಕ ತೃಪ್ತಿಯ ವಿಚಾರ ಅದೇನೇ ಆದರೂ, ಅವನ ಲೈಂಗಿಕ ಅಗತ್ಯವನ್ನು ಪೂರೈಸಬೇಕು ಎಂಬುದು ಕೂಡಾ ಸೇವೆಯಪಟ್ಟಿಗೇ ಸೇರಿಹೊಗುತ್ತದೆ. ಪ್ರೀತಿಯ ಸುಳಿವೂ ಇಲ್ಲದ ಆ ಸಂಬಂಧದಲ್ಲಿ ಎಲ್ಲವೂ ಅಧಿಕಾರ ಮತ್ತು ಅಧೀನತೆ ಎಂಬ ಸಮೀಕರಣದಲ್ಲೇ ಸಾಗುತ್ತದೆ. -ಎಚ್.ಎಸ್. ಶ್ರೀಮತಿ (ಲೇಖಕರ ಮಾತುಗಳಿಂದ)
©2024 Book Brahma Private Limited.