ಮಹಾತ್ಮ ಗಾಂಧಿ ಭೌತಿಕವಾಗಿ ಅಳಿದ ಮೇಲೆ ದೇಶದ ಮಣ್ಣ ಕಣಕಣದಲ್ಲೂ ಇದ್ದುದು ಅವರು ಬಿತ್ತಿ ಹೋದ ಆದರ್ಶಗಳು. ಗಾಂಧಿವಾದ ಬಗೆ ಬಗೆಯ ರೂಪದಲ್ಲಿ ಚಿಗುರೊಡೆಯಿತು. ಅನೇಕ ವ್ಯಕ್ತಿತ್ವಗಳಲ್ಲಿ ಜೀವ ತಳೆಯಿತು. ಹಾಗೆ ಅಹಿಂಸಾಮೂರ್ತಿಯನ್ನು ಹನ್ನೆರಡು ಮಹನೀಯರ ಮೂಲಕ ಮರು ಆವಿಷ್ಕರಿಸಿರುವ ಯಶಸ್ವಿ ಯತ್ನ ’ಬಾಪು ಕುಟಿ’.
ರಾಜಾಸ್ಥಾನದಲ್ಲಿ ಮಾಹಿತಿ ಹಕ್ಕು ಮತ್ತು ಕನಿಷ್ಟ ಕೂಲಿಗಾಗಿ ಹೋರಾಟ ಸಂಘಟಿಸಿದ ದಿಟ್ಟ ಮಹಿಳೆ ಅರುಣಾ ರಾಯ್, ಗ್ರಾಮೀಣ ಉದ್ಯಮದ ಬಗ್ಗೆ ಸಂಶೋಧನೆ ನಡೆಸಿದ ಕರುಣಾಕರನ್, ಪರಂಪರಾಗತ ಕಲೆಗಳ ಪುನರ್ ಜೀವನಕ್ಕಾಗಿ ದುಡಿದ ರವೀಂದ್ರ ಶರ್ಮ, ಪರ್ಯಾಯ ಶಕ್ತಿಮೂಲ ಮತ್ತು ಉತ್ಪಾದನಾ ಕ್ರಮಗಳ ಹುಡುಕಾಟ ನಡೆಸಿದ ವಿಜ್ಞಾನಿ ಸಿ.ವಿ. ಶೇಷಾದ್ರಿ, ಕುಷ್ಠರೋಗಿಗಳ ಶುಶೂಷೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಬಾಬಾ ಆಮ್ಟೆ, ಗಾಂಧಿವಾದಿ ಅರ್ಥಶಾಸ್ತ್ರಜ್ಞ ಜೆ.ಸಿ. ಕುಮಾರಪ್ಪ, ಗಂಗಾನದಿಯನ್ನು ಸ್ವಚ್ಛಗೊಳಿಸುವ ಕಾಯಕ ಕೈಗೊಂಡ ಕಾಹಲ್‌ಗಾಂ ಗ್ರಾಮಸ್ಥರು ಹಾಗೂ ಆಂಧ್ರದ ನೇಯ್ಗೆ ವೃತ್ತಿಗೆ ಮರುಹುಟ್ಟುಕೊಟ್ಟ ದಸ್ತಕಾಕ್ ಚಳವಳಿಯಲ್ಲಿ ಪಾಲ್ಗೊಂಡವರ ಕುರಿತು ಲೇಖಕರಾದ ರಜನಿ ಭಕ್ಷಿ ವಿವರಿಸಿದ್ದಾರೆ. ಕೃತಿಯನ್ನು ಕನ್ನಡಕ್ಕೆ ತಂದವರು ಕೆ. ವೆಂಕಟರಾಜು.
©2024 Book Brahma Private Limited.