‘ಗಾಳಿಯಲ್ಲಿ ಹಾರಿ ಬಂದ ಹೂಗಳು’ ಮೈ ಶ್ರೀ. ನಟರಾಜ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಅಮೆರಿಕಾದಲ್ಲಿ ಕನ್ನಡ ಸಾಹಿತ್ಯದ ವಿಕಸನದಲ್ಲಿ ತಮ್ಮ ಸೃಜನಶೀಲ ಕೃತಿಗಳಿಂದಲೂ, ಅನುವಾದಗಳಿಂದಲೂ, ಹಾಗೂ ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷತೆ ಮೊದಲಾದ ಹಲವಾರು ರೀತಿಗಳಲ್ಲಿ ಮುಂದಾಳುತ್ವ ವಹಿಸಿರುವ ಡಾ. ಮೈಸೂರು ನಟರಾಜ್ ಅವರು ಹಲವು ಭಾಷೆಗಳ ಪ್ರಮುಖ ಕವನಗಳನ್ನು ಸುಲಲಿತ ರೀತಿಯಲ್ಲಿ ಅನುವಾದಿಸಿ ಕನ್ನಡಕ್ಕೆ ಬಹುಮೂಲ್ಯ ಕೊಡುಗೆ ನೀಡಿದ್ದಾರೆ. ಈ ಅನುವಾದಗಳ ಮೂಲಕ ಅವರು ಭಾರತೀಯರಿಗೆ ಹೆಚ್ಚು ಪರಿಚಿತವಲ್ಲದ ಅಮೆರಿಕವನ್ನು, ಅಲ್ಲಿಯ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ತುಮುಲಗಳನ್ನು, ಅದಕ್ಕೆ ಪ್ರತಿಸ್ಪಂದಿಸುವ ಆಧುನಿಕ, ಸೂಕ್ಷ್ಮ ಸಂವೇದನೆಗಳನ್ನು ಮನಮುಟ್ಟುವಂತೆ ಪರಿಚಯಿಸುತ್ತಾರೆ. ಮಾಯಾ ಏಂಜಲೋ, ಅಸೀಮ್ ಜಬಾರಿ, ಅಮಾಂಡಾ ಗೋರ್ಮನ್, ಮೊದಲಾದವರ ಪದ್ಯಗಳು ಇಲ್ಲಿಯ ಕಪ್ಪು ಜನರ ಚಾರಿತ್ರಿಕ, ಜನಾಂಗೀಯ ಬೇಗುದಿಯನ್ನು ಹೊಟ್ಟೆ ಚುರ್ ಎನುವಂತೆ ಪ್ರತಿಪಾದಿಸಿದರೆ, ಜಾನ್ ಡೆನ್ವರ್, ಕ್ರಿಸ್ಟಲ್ ಗೇಲ್ ಮೊದಲಾದವರ ಹಾಡುಗಳು ಸಮಕಾಲೀನ ಅಮೆರಿಕಾದ ಜಾನಪದ ಸಂಸ್ಕೃತಿಯ ಪ್ರತೀಕಗಳಾಗಿವೆ. ಜೊತೆಗೇ, ಇಂಗ್ಲೆಂಡಿನ ಅದ್ಭುತ, ಅಭಿಜಾತ ಕವಿ ಜಾನ್ ಡನ್‌ನ 'ಯಾವನೂ ತನ್ನಷ್ಟಕ್ಕೇ ಒಂದು ದ್ವೀಪವಲ್ಲ' ಎಂಬ ಪ್ರಸಿದ್ಧ ಧ್ವನಿಪೂರ್ಣ ಕವಿತೆ, ಐಲೆರ್ಂಡಿನ ನೋಬೆಲ್ ವಿಜೇತ ಸೀಮಸ್ ಹೀನಿಯ 'ಇತಿಹಾಸ-ಭರವಸೆ ಪ್ರಾಸವಾಗುವ' ಆಶಯ, ಇಂತಹವು ಪ್ರಪಂಚದಲ್ಲಿ ಇಂದು ನಡೆಯುತ್ತಿರುವ ಅಪಾರ ಮೋಸ, ಸುಲಿಗೆ, ಕ್ರೌರ್ಯ, ಅನ್ಯಾಯ, ಇವುಗಳನ್ನು ನಿರಾಕರಿಸದೆಯೂ ಜಗದಾದ್ಯಂತ ನಾಗರೀಕತೆಯನ್ನು ರಕ್ಷಿಸಿಕೊಂಡು ಬಂದಿರುವ ಒಂದು ರೀತಿಯ ಮೊಂಡು ಆದರ್ಶವಾದವನ್ನು ಪ್ರತಿಪಾದಿಸುತ್ತವೆ. ಈ ಕವನಗಳಲ್ಲಿ ನಾವು ಕಾಣುವುದು ಒಬ್ಬ ಪ್ರವಾಸಿ ಕಾಣುವ ಅಮೆರಿಕವನ್ನಲ್ಲ. ಒಂದು ರೀತಿಯ ಜಾಗತಿಕ, ಚಾರಿತ್ರಿಕ ದರ್ಶನವನ್ನು. ಹೀಗಾಗಿ ಈ ಕವನಗಳು ಓದುಗರ ದೃಷ್ಟಿಯನ್ನು ಹಿರಿದಾಗಿಸುತ್ತವೆ, ಅವರ ಅಂತಃಕರಣವನ್ನು ಕಲಕುತ್ತವೆ, ಅವರ ಅಂತಃಸಾಕ್ಷಿಯನ್ನು ಎಚ್ಚರಿಸುತ್ತವೆ ಎಂಬುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
©2024 Book Brahma Private Limited.