ಋಗ್ವೇದ ಸಂಹಿತಾ ಭಾಗ-7 ಕೃತಿಯು ಹೆಚ್. ಪಿ ವೆಂಕಟರಾವ್ ಶರಣ್ಮಾ ಅವರ ಅನುವಾದಿತ ಕೃತಿಯಾಗಿದೆ. ಪ್ರಥಮಾಷ್ಟಕದಲ್ಲಿ ಆರನೆಯ ಅಧ್ಯಾಯವಾಗಿರುವ ಈ ಕೃತಿಯು ಪ್ರಥಮ ಮಂಡಲದ ಸೂಕ್ತಗಳು 81-94 ಅನ್ನು ಒಳಗೊಂಡಿದೆ. ಋಗ್ವೇದ ಸಂಹಿತಾ ಪುಟಗಳನ್ನು ಯುವಜನಾಂಗಕ್ಕೆ ಪರಿಚಯಿಸಬೇಕೆಂಬ ಉದ್ದೇಶದೊಂದಿಗೆ ರೂಪಿತವಾಗಿರುವ ಈ ಕೃತಿಯು ಋಗ್ವೇದವನ್ನು ಅರ್ಥಾನುವಾದ ವಿವರಣೆಗಳೊಡನೆ ವಿವರಿಸುತ್ತದೆ. ಇಲ್ಲಿ ಅನುಕ್ರಮಣಿಕೆಗಳ ವಿವರಣೆಯು ದೊರೆಯುತ್ತದೆ. ಅನುಕ್ರಮಣಿಕೆಯೆಂದರೆ ಶೌನಕಋಷಿಗಳಿಂದ ಪ್ರೋಕ್ತವಾದ ಸರ್ವಾನುಕ್ರಮಣಿ. ಇದರಲ್ಲಿ ಪ್ರತಿಸೂಕ್ತದಲ್ಲಿರುವ ಋಕ್ಸಂಖ್ಯೆ, ಆ ಋಕ್ಕುಗಳ ದ್ರಷ್ಟೃಗಳಾದ ಋಷಿಗಳ ಹೆಸರು, ಸೂಕ್ತದ ದೇವತೆ ಮತ್ತು ಋಕ್ಕುಗಳ ಛಂದಸ್ಸು ಮೊದಲಾದ ವಿಷಯಗಳ ನಿರೂಪಣೆ ಇದೆ. ಈ ಅನುಕ್ರಮಣಿಕೆಯಲ್ಲದೆ ಋಷಿಗಳ ವಿಷಯಗಳನ್ನು ಹೇಳುವ ಆರ್ಷೇಯಾನುಕ್ರಮಣಿ, ಛಂದಸ್ಸಿನ ವಿಷಯವನ್ನು ಹೇಳುವ ಛಂದೋನುಕ್ರಮಣಿ ಮೊದಲಾದ ಬೇರೆ ಬೇರೆ ಅನುಕ್ರಮಣಿಕೆಗಳಿವೆ. ಈ ಗ್ರಂಥದಲ್ಲಿ ವೇದದಲ್ಲಿ ಹೇಳಿರುವ ಛಂದಸ್ಸಿನ ವಿಷಯಗಳ ಜತೆಯಲ್ಲಿ ಆಧುನಿಕ ಸಂಸ್ಕೃತದಲ್ಲಿ ಬಳಕೆಯಲ್ಲಿರುವ ಶ್ಲೋಕಗಳ ವೃತ್ತಲಕ್ಷಣಾದಿಗಳ ವಿವರವೂ ಇರುವುದರಿಂದ ಈ ಗ್ರಂಥವು ಅಷ್ಟು ಪ್ರಮಾಣಾರ್ಹವಲ್ಲ. ಈ ವಿಷಯದಲ್ಲಿ ಕಾತ್ಯಾಯನಮಹರ್ಷಿವಿರಚಿತವಾದ ಸರ್ವಾನುಕ್ರಮಣಿಯೆಂಬ ಗ್ರಂಥವು ಪ್ರಾಚೀನವೂ ಪ್ರಮಾಣಾರ್ಹವೂ ಆಗಿರುವುದರಿಂದ ಅದರಲ್ಲಿರುವ ವಿಷಯನಿರೂಪಣೆಯ ಆಧಾರದ ಮೇಲೆ ಋಗ್ವೇದದ ಛಂದಸ್ಸುಗಳ ವಿಷಯವಾಗಿ ಸೂಕ್ಷ್ಮ ವಿವರಣೆಯನ್ನು ಇಲ್ಲಿ ಕೊಟ್ಟಿರುತ್ತಾರೆ.
©2024 Book Brahma Private Limited.