ಕೋಬಾಡ್ ಗಾಂಧಿ ಅವರು ಬರೆದಿರುವ ಕೃತಿಯನ್ನು ಅನುವಾದಕಿ ಎ. ಜ್ಯೋತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೋಬಾಡ್ ಗಾಂಧಿ, ಜೈಲು ವಾಸದ ನೆನಪುಗಳು. ನ್ಯಾಯ ಮತ್ತು ವಿಮೋಚನೆಯ ಹುಡುಕಾಟದಲ್ಲಿ ಉತ್ಸಾಹ ಮತ್ತು ಬದ್ಧತೆಗಳಿಂದ ಕೂಡಿದ ಕತೆ. ಅತಂತ್ರ ಸ್ವಾತಂತ್ರ್ಯ ಕೃತಿಯು ಕೋಬಾಡ್ ಗಾಂಧಿಯವರ ಜೈಲುವಾಸದ ನೆನಪುಗಳಷ್ಟೇ ಆಗಿರುವುದಿಲ್ಲ. ಅವರ ಮತ್ತು ಅನುರಾಧಾರವರ ಹೋರಾಟಗಳ ಸ್ಮರಣೆಯನ್ನೂ ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೆ ಈ ಪುಸ್ತಕದ ಕೆಲವು ಅಧ್ಯಾಯಗಳು ಒಂದಷ್ಟು ತಾತ್ವಿಕ ಪ್ರಶ್ನೆಗಳನ್ನೂ ನಮ್ಮ ಮುಂದಿಡುತ್ತದೆ, ಅವುಗಳನ್ನು ಒಪ್ಪಬೇಕೋ, ಬಿಡಬೇಕೋ, ಅವುಗಳಿಗೆ ಉತ್ತರಿಸಬೇಕೋ ಇಲ್ಲವೇ ಅವುಗಳನ್ನು ಮುಂದುವರೆಸಬೇಕೋ, ಇವೆಲ್ಲ ಓದುಗರಿಗೆ ಬಿಟ್ಟಿದ್ದು, ಒಟ್ಟಾರೆ ಅವು ಲೇಖಕರ ಅಭಿಪ್ರಾಯಗಳಾಗಿರುತ್ತವೆ. ಈ ರಚನೆಯು ಮಾವೋವಾದಿ ಚಳುವಳಿಯ ಬಗ್ಗೆ, ಅದರ ವಿಘಟನೆಯ ಬಗ್ಗೆ ಕೆಲವು ಹೊಳಹುಗಳನ್ನು ನೀಡುತ್ತದೆ. ಅಂತಿಮವಾಗಿ “ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ ಒಂದು ದಿನ ಅವು ಹೂವಾಗಿ ಅರಳುತ್ತವೆ” ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುವುದನ್ನು ಕಾಣಬಹುದು. ನಮ್ಮೆಲ್ಲರ ಗುರಿ ಮತ್ತು ಆಶಯ ಒಂದೇ ಆಗಿದ್ದರೂ ಹಾದಿಗಳು ಬೇರೆಬೇರೆ. ಇವೆ, ಸಮಸ್ತ ದುಡಿಯುವ ಜನತೆಗೆ ಸ್ವಾತಂತ್ರ್ಯದ, ಸಮೃದ್ಧತೆಯ, ಸ್ವಾವಲಂಬನೆಯ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ಆಶಯಗಳು ಈಡೇರುವಂತಾಗಬೇಕಾದರೆ, ಸಮಾನ ಗುರಿಗಳನ್ನು ಹೊಂದಿದ ಮತ್ತು ಛಿದ್ರಗೊಂಡಿರುವ ಜನಚಳುವಳಿಗಳು ಬೇಷರತ್ತಾಗಿ ಒಂದಾಗಬೇಕು ಮತ್ತು ಗಟ್ಟಿಗೊಳ್ಳಬೇಕು ಎಂಬುದು ಅತಿ ಮುಖ್ಯ. ಎಂದು ಅನುವಾದಕಿ ಜ್ಯೋತಿ.ಎ ಅವರು ಅನುವಾದಕಿ ನುಡಿಗಳಲ್ಲಿ ತಿಳಿಸಿದ್ದಾರೆ.
©2024 Book Brahma Private Limited.