ವಿಶ್ವ ಸಾಹಿತ್ಯದಲ್ಲಿ ಖಲೀಲ್ ಗಿಬ್ರಾನ್‌ನಷ್ಟು ಕಾಡುವ ಸೃಜನಶೀಲ ಮತ್ತೊಬ್ಬನಿಲ್ಲ. ಕವಿತೆಯಂತೆ ಇರುವ ಚಿತ್ರಗಳು- ಚಿತ್ರಗಳಂತೆ ಇರುವ ಕವಿತೆಗಳನ್ನು ಬರೆದವನು ಅವನು. ಜೊತೆಗೆ ತತ್ವಜ್ಞಾನದ ಮೆರಗು. ಹಾಗೆಂದೇ ಅವನ ಹೆಚ್ಚು ಹೆಚ್ಚು ಕೃತಿಗಳು ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಳ್ಳುತ್ತವೆ. ಅವನ ’ಪ್ರಾಫೆಟ್’ ಓದದವರೇ ಇಲ್ಲ ಎನ್ನುವಷ್ಟು ಕೃತಿ ಜನಪ್ರಿಯ.
ಖಲೀಲ್ ಗಿಬ್ರಾನ್ ತನ್ನ ಪ್ರೇಯಸಿ ಮಯ್‌ಗೆ (ಮೇರಿ ಹಸ್ಕೆಲ್) ಬರೆದ ಪ್ರೇಮ ಕವಿತೆಗಳ ಗುಚ್ಛ ’ಖಲೀಲ್ ಗಿಬ್ರಾನ್ ಪ್ರೇಮ ಪತ್ರಗಳು’. ಪದ್ಯದ ಸೊಬಗಲ್ಲಿ ಗದ್ಯವನ್ನು ಹೆಣೆಯುವ ಕವಯತ್ರಿ ಕಸ್ತೂರಿ ಬಾಯರಿ ಇದನ್ನು ಅನುವಾದಿಸಿದ್ದಾರೆ.
ಮಯ್,
ಹಗಲುರಾತ್ರಿಯನ್ನು ಒಂದುಗೂಡಿಸುವ ಒಂದು ಎಳೆ: ಇಬ್ಬರ ನಡುವೆ ಉಂಟಾದ ಒಂದು ಬೆಸುಗೆ ಭೂತ-ವರ್ತಮಾನ-ಭವಿಷ್ಯತ್ಕಾಲವನ್ನು ಒಂದುಗೂಡಿಸುತ್ತದೆ. ಇಂತಹ ಒಂದು ಬೆಸುಗೆಯಲ್ಲಿ ಖಾಸಗಿ ಭಾವಗಳು ಗಹನವಾದ, ಅಮೂಲ್ಯವಾದ ಕನಸುಗಳನ್ನು ಹುಟ್ಟು ಹಾಕಿರುತ್ತವೆ.
ಇಂತಹ ಒಂದು ಭಾವ ಹರಿತವಾದ ನೋವನ್ನು ಹುಟ್ಟು ಹಾಕಿರುತ್ತದೆ. ಅದು ಎಂದೂ ಮಾಯುವುದಿಲ್ಲ. ಹಂಚಲು ಬರುವುದಿಲ್ಲ. ಯಾವುದೇ ವೈಭವ, ಋಷಿ, ಕಲ್ಪನೆ, ತಿಳುವಳಿಕೆ ಅದನ್ನು ಮುಟ್ಟಲಾರವು. ಅವು ಬೇರೆಯವರನ್ನು ಸ್ಪರ್ಶಿಸಲಾರವು. ನನ್ನೆಲ್ಲಾ ಗುಟ್ಟುಗಳನ್ನು ನಿನ್ನಲ್ಲಿ ಮಾತ್ರ ಹೇಳಿಕೊಳ್ಳಬಲ್ಲೆ, ನನಗೆ ಜೀವನ ಅವಳನ್ನು ಉಡುಗೊರೆಯಾಗಿ ಕೊಟ್ಟಿದೆ. ನಾನು ನನಗೆ ತೀರ ಹತ್ತಿರವಾದ ವಿಷಯಗಳನ್ನು ಮಾತ್ರ ಈ ಪತ್ರಗಳ ಮುಖಾಂತರ ಅವಳಲ್ಲಿ ಹೇಳಿಕೊಳ್ಳುವೆ. ನಂತರ ಬೇಕಾದರೆ ಪತ್ರಕ್ಕೆ ಉರಿ ಹತ್ತಲಿ. ನಾನು ಚಿಂತಿಸುವುದಿಲ್ಲ. ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ ಗೆಳತಿ, ನೀನು ಯಾವುದನ್ನೂ ಹಚ್ಚಿಕೊಳ್ಳದೇ ಮುಕ್ತವಾಗಿ ಮನುಕುಲದ ದಾರಿಗಳ ಬಗ್ಗೆ ಬರೆ, ನೀನು ಮತ್ತು ನಾನು ಈ ಮನುಕುಲದ ವ್ಯಾಪಾರವನ್ನು, ವಿಸ್ತಾರವನ್ನು ಬಲ್ಲೆವು. ನಾವು ಒಂದು ಕ್ಷಣವನ್ನೂ ಈ ದಾರಿಯಿಂದ ಕಳೆದುಕೊಳ್ಳಬಾರದು. ಒಂದು ಚಿಕ್ಕ ವಿರಾಮವನ್ನೂ ಕಿರಣಗಳನ್ನು ದಿಟ್ಟಿಸಿನೋಡುವಲ್ಲಿ ತೆಗೆದುಕೊಳ್ಳಬಾರದು. ಎಲ್ಲವೂ ರಾತ್ರಿಯನ್ನು, ಹಗಲನ್ನು, ಕಾಲವನ್ನು ಮೀರಿದ ಸತ್ಯದ ಕ್ಷಣಗಳಾಗಬೇಕು.
ದೇವರು ನನ್ನ ಸಲುವಾಗಿ ನಿನ್ನ ಕಾಪಾಡಲಿ..
©2024 Book Brahma Private Limited.