ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರತಿ ವರ್ಷ ಅನುವಾದ ಕ್ಷೇತ್ರಕ್ಕೆ ಅನುಪಮ ಕೊಡುಗೆಯನ್ನು ನೀಡಿದ ಗಣ್ಯರಿಗೆ ಗೌರವ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಕನ್ನಡದಿಂದ ಇತರ ಭಾಷೆಗಳಿಗೆ, ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುತ್ತ ಬಂದಿರುವ ಹಲವರು ಈಗಾಗಲೇ ಈ ಗೌರವವನ್ನು ಪಡೆದಿದ್ದಾರೆ. ಇದರೊಡನೆ ಅವರ ಒಂದು ಅನುವಾದ ಕೃತಿಯನ್ನು ಪ್ರಾಧಿಕಾರದ ಮೂಲಕ ಪ್ರಕಟಿಸುವ ಯೋಜನೆ ಇತ್ತೀಚೆಗೆ ಆರಂಭವಾಯಿತು.
ಕನ್ನಡದ ಮಹತ್ವದ ಕವಿ ಎಚ್.ಎಸ್. ಶಿವಪ್ರಕಾಶ್ ಅವರ ಅನುವಾದಿತ ಕವಿತೆಗಳ ಸಂಕಲನ ’ಮರು ರೂಪುಗಳು; ಪ್ರಕಟಗೊಂಡಿದ್ದು ಎರಡೂವರೆ ದಶಕಗಳ ಹಿಂದೆ. ಕೃತಿ ಕುರಿತು ಅವರು ಆಡಿರುವ ಮಾತುಗಳೂ ಹೀಗಿವೆ: ’ನಾನು ಕವಿತಾರಚನೆಗೆ ತೊಡಗಿದಾಗ ನನಗೆ ಸ್ಫೂರ್ತಿ ನೀಡುವ ಮಾದರಿಗಳ ಅಗತ್ಯ ಉಂಟಾಯಿತು. ನನಗೆ ಸಮಕಾಲೀನ ಕನ್ನಡ ಕಾವ್ಯದಲ್ಲಿ ಉಪಲಬ್ದವಿದ್ದ ಮಾದರಿಗಳಾಗಲಿ ಅಥವಾ ಇಂಗ್ಲಿಷಿನಿಂದ ಆವರೆಗೆ ಬಂದಿದ್ದ ಮಾದರಿಗಳಾಗಲಿ ಸಾಲದೆನಿಸಿತು. ಆ ಮಾದರಿಗಳ ಹೊರಗಿನ ಮಾದರಿಗಳು ನನ್ನ ಮತ್ತು ಆವೊತ್ತಿನ ಕನ್ನಡ ಕಾವ್ಯಕ್ಕೆ ಬರಬೇಕೇನೋ ಎಂಬ ಯೋಚನೆ ನನ್ನನ್ನು ಕಾಡತೊಡಗಿತು. ಆ ಸುತ್ತುನೆಲೆಯಲ್ಲಿ ಕನ್ನಡಕ್ಕೆ ಮತ್ತು ನನಗೆ ಆವರೆಗೆ ದಕ್ಕದ ಮಾದರಿ ಮತ್ತು ಸಾಮಗ್ರಿಗಳನ್ನು ಇತರ ಭಾರತೀಯ ಮತ್ತು ಪರದೇಶಿ ಕಾವ್ಯ ಪ್ರಪಂಚಗಳಿಂದ ತೆಗೆದುಕೊಂಡು ಬಂದರೆ ಹೊಸ ದಾರಿಗಳು ಸಿಗಬಹುದೆಂಬ ನಂಬುಗೆಯಿಂದ ಇಲ್ಲಿ ಸೇರ್ಪಡೆಯಾಗಿರುವ ಕವಿತೆಗಳ ಅನುವಾದಕ್ಕೆ ತೊಡಗಿದೆ. ನನ್ನ ಮಟ್ಟಿಗೆ ಈ ಪ್ರಯತ್ನ ವಿಫಲವಾಗಲಿಲ್ಲ. ಅನುವಾದದ ಸಂದರ್ಭದಲ್ಲಿ ಕಲಿತ ಪಾಠಗಳು ನನ್ನ ಕವಿತೆಗಳ ಮುಂದಿನ ಹಾದಿಗಳನ್ನು ನನಗೆ ಅನಿರೀಕ್ಷಿತವಾಗುವ ಮಟ್ಟಕ್ಕೆ ಬದಲಾಯಿಸಿದವು. 'ಮರು ರೂಪಗಳು' ನನ್ನ ಕವಿತೆಗಳನ್ನಂತೂ ಮರುರೂಪಿಸಿದವು. ವೈವಿಧ್ಯಮಯವಾದ ಇಲ್ಲಿನ ಕವಿತೆಗಳ ಅನುವಾದ ಕಾರ್ಯವೂ ವೈವಿಧ್ಯಮಯವೆಂಬುದು ಅರಿತಾಗ ಅನುವಾದ ಪ್ರಕ್ರಿಯೆಯ ಬಹುಳತೆಯೂ ನನಗರ್ಥವಾಗಿ ಮುಂದಿನ ನನ್ನ ಅನುವಾದಗಳ ಹಾದಿಗಳು ಹಲವು ದಿಕ್ಕುಗಳಲ್ಲಿ ಕವಲೊಡೆದವು. ಸ್ವಂತ ಕವಿತಾ ರಚನೆ ಮತ್ತು ಕಾವ್ಯಾನುವಾದದ ನಡುಗೆರೆ ತೀರ ತೆಳುವೆಂಬ ಅನುಭವವೂ ನನಗಾಯಿತು’ ಎಂದಿದ್ದಾರೆ.
©2024 Book Brahma Private Limited.