‘ಅಜ್ಞಾತ ಭಾರತ’ ಡಾ. ಹುಸೈನ್ ರಂಡತ್ತಾನಿ ಅವರ ಕೃತಿಯನ್ನು ಸ್ವಾಲಿಹ್ ತೋಡಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇತಿಹಾಸದ ಅಜ್ಞಾತ ಸತ್ಯಗಳನ್ನು ಜನ ಸಾಮಾನ್ಯರಿಗೆ ತಲುಪಿಸಬೇಕಾದ ಜರೂರತ್ತಿದೆ. ಸರ್ವಾಲಂಕಾರಭೂಷಿತ ಸುಳ್ಳುಗಳನ್ನು ನಿರಾಡಂಬರ ಸತ್ಯದೊಂದಿಗೆ ಎದುರಿಸುವುದು ಸುಲಭವಲ್ಲ. ಫ್ಯಾಶಿಷ್ಟರ ಸುಳ್ಳಿನ ಕೋಟೆಯನ್ನು ಬೇಧಿಸುವ ಸಾಹಸವನ್ನು ಹಲವು ಇತಿಹಾಸಕಾರರು ಮಾಡಿದ್ದಾರೆ. ಅವರಲ್ಲಿ ಡಾ. ಹುಸೈನ್ ರಂಡಸ್ತಾನಿ ಕೂಡ ಒಬ್ಬರು. ಮಲೆಯಾಳಂ ಭಾಷೆಯ ಪ್ರಸಿದ್ಧ ಲೇಖಕರಾದ ಇವರು ಇತಿಹಾಸಕ್ಕೆ ಸಂಬಂಧಿಸಿದ ಹಲವು ಅಧ್ಯಯನಾತ್ಮಕ ಕೃತಿಗಳನ್ನು ರಚಿಸಿದ್ದಾರೆ. ‘ಅರಿಯಪ್ಪೆಡಾತ ಇಂಡಿಯ’ ಅವರ ಬಹಳ ಪ್ರಸಿದ್ಧ ಕೃತಿ. ಬಹಳಷ್ಟು ಮುಖ್ಯವಾಹಿನಿಯ ಇತಿಹಾಸ ಸಂಶೋಧಕರು ಮುಟ್ಟದೆ ಬಿಟ್ಟಿರುವ ಭಾರತದ ಸೂಫಿ ಹಾಗೂ ಸುಲ್ತಾನರುಗಳ ಚರಿತ್ರೆಯೇ ಅರಿಯಪ್ಪೆಡಾತ ಇಂಡಿಯಾದ ವಸ್ತು. ಮುಸ್ಲಿಮರು ದಾಳಿಕೋರರು, ಇಸ್ಲಾಮ್ ಖಡ್ಗದಿಂದ ಹರಡಿದ ಧರ್ಮ, ಮುಸ್ಲಿಮ್ ಸುಲ್ತಾನರುಗಳು ಭಾರತಕ್ಕೆ ಬಂದಿರುವುದೇ ಇಲ್ಲಿಯ ಹಿಂದೂಗಳನ್ನು ಮತಾಂತರ ಮಾಡಲು ಮೊದಲಾದ ಹಸಿ ಸುಳ್ಳುಗಳನ್ನು ಈ ಕೃತಿ ಇತಿಹಾಸದ ದಾಖಲೆಗಳೊಂದಿಗೆ ನಿರಾಕರಿಸುತ್ತಾ ಹೋಗುತ್ತದೆ. ಜೊತೆಗೆ ಸೂಫಿಗಳ ಕುರಿತ ಯುರೋಪ್ ಪ್ರಣೀತ ಚಿಂತಕರ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳನ್ನು ಪರಿಶೀಲಿಸಿ, ಅದು ಹೇಗೆ ಅಸತ್ಯ ಎಂಬುದನ್ನು ನಿರೂಪಿಸುತ್ತದೆ. ಸೂಫಿಗಳ ಬದುಕು, ಅವರ ನಡುವಿನ ವಾಗ್ವಾದ, ವಿವಾದಗಳ ಪರಿಚಯವಿದೆ. ಭಾರತೀಯ ಸೂಫಿ ಪ್ರಜ್ಞೆ ಹಾಗೂ ವಿವಿಧ ಆಧ್ಮಾತಿಕ ಸರಣಿಗಳ ನೋಟವಿದೆ. ಒಟ್ಟಾರೆ ಈ ಕೃತಿ ಬಹುಮಟ್ಟಿಗೆ ಅಜ್ಞಾತವಾಗಿಯೇ ಉಳಿದಿರುವ ಭಾರತದ ಚರಿತ್ರೆಯನ್ನು ಹೇಳುತ್ತಾ, ವರ್ತಮಾನ ಭಾರತಕ್ಕೆ ಅಂಟಿಕೊಂಡಿರುವ ಫ್ಯಾಶಿಷ್ಟ್ ರೋಗಕ್ಕೆ ಚಿಕಿತ್ಸೆಯನ್ನು ಸೂಚಿಸುತ್ತದೆ. ಇಷ್ಟು ಮಹತ್ವದ ಕೃತಿಯನ್ನು ಲೇಖಕ ಸ್ವಾಲಿಹ್ ತೋಡಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.