‘ಪ್ರವಾದಿ: ಭಾವಾರ್ಥ ಸಹಿತ’ ಡಾ.ಕೆ. ಸರೋಜಾ ಅವರು ಅನುವಾದಿಸಿರುವ ಕೃತಿ. ಈ ಕೃತಿಯು ಗಿಬ್ರಾನನ ಬದುಕಿನ ಸಂಕ್ಷಿಪ್ತ ಪರಿಚಯ ಹಾಗೂ ಈ ಪುಸ್ತಕವನ್ನು ಹೇಗೆ, ಏಕೆ ಓದಬೇಕೆಂಬುದನ್ನು ಸಕಾರಣವಾಗಿ ವಿವರಿಸಿರುವ ಕೃತಿಯಾಗಿದ್ದು, ಓದುಗರಿಗೆ ದಾರಿದೀಪದಂತೆ ಇದೆ. ಲೇಖಕಿಯು ಹೊಳಹುಗಳಲ್ಲಿ ಕೊಟ್ಟಿರುವ ಭಾವಾರ್ಥಗಳು ಹಾಗೂ ಟಿಪಣಿಗಳು ಗಿಬ್ರಾನನ ಮೂಲ ಆಶಯಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿವೆ. ಖಲೀಲ್ ಗಿಬ್ರಾನನ ಆಶಯಗಳನ್ನೂ ಕಾವ್ಯದ ಸೊಗಸನ್ನೂ ಕನ್ನಡದಲ್ಲಿ ಸೊಗಸಾಗಿ ಸೆರೆಹಿಡಿದಿರುವ ಲೇಖಕಿ ಸರೋಜಾ ಅವರ ಕಾರ್ಯ ಶ್ಲಾಘನೀಯ. ಈ ಪುಸ್ತಕಕ್ಕೆ ಡಾ. ನಾ. ಸೋಮೇಶ್ವರ ಅವರು ಮುನ್ನುಡಿ ಬರೆದಿದ್ದಾರೆ. ‘ಖಲೀಲ್ ಗಿಬ್ರಾನ್ ಆಧುನಿಕ ಕಾಲವು ಕಂಡ ಅಪರೂಪದ ಕವಿ, ಕಲಾವಿದ ಹಾಗೂ ತತ್ತ್ವಜ್ಞಾನಿ..ಖಲೀಲ್ ಗಿಬ್ರಾನ್ ಹಲವು ಕೃತಿಗಳನ್ನು ಬರೆದಿರುವನಾದರೂ, ಅವರುಗಳಲ್ಲಿ ಅತ್ಯಂತ ಪ್ರಮುಖವಾರುವುದು, ಅವನಿಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟದ್ದು ಹಾಗೂ ನನಗೆ ಮೆಚ್ಚಿಗೆಯಾಗಿರುವುದು ಅವನ ದಿ ಪ್ರಾಫೆಟ್ (ಪ್ರವಾದಿ) ಎನ್ನುವ ಕೃತಿ. ಜಗತ್ತಿನ ಹಲವು ದೇಶಗಳಲ್ಲಿ, ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ, ಪ್ರವಾದಿಯ ಪದ್ಯಗಳನ್ನು ಹಲವು ಸಂದರ್ಭಗಳಲ್ಲಿ ವಾಚಿಸುವ ಪದ್ದತಿಯು ಬೆಳೆದು ಬಂದಿದೆ. (ನೆಲ್ಸನ್ ಮಂಡೇಲರ ಮರಣವಾದಾಗ ನಡೆದ ಕ್ರಿಯಾಕರ್ಮದಲ್ಲೂ ಖಲೀಲ್ ಗಿಬ್ರಾನನ ಪ್ರವಾದಿಯನ್ನು ವಾಚಿಸಿದ್ದರು) ಬಹುಶಃ ಇದು ಪ್ರವಾದಿ ಕೃತಿಯ ಜನಪ್ರಿಯತೆ, ಸಾರ್ಥಕತೆ ಹಾಗೂ ಅನಿವಾರ್ಯತೆಯನ್ನು ಸೂಚಿಸುತ್ತದೆ ಎನ್ನಬಹುದು ಎನ್ನುತ್ತಾರೆ ಡಾ. ನಾ. ಸೋಮೇಶ್ವರ. ಜೊತೆಗೆ ಯಾವುದೇ ಧರ್ಮವನ್ನು ಖಂಡಿಸದೆ, ಯಾವುದೇ ಧರ್ಮದ ಪಕ್ಷಪಾತಿಯಾಗದೆ, ಎಲ್ಲಾ ಧರ್ಮಗಳ ಸಾರವನ್ನು ಭಟ್ಟಿಯಿಳಿಸಿದಂತೆ, ಆದರೆ ಸಾಂಪ್ರದಾಯಿಕ ಧಾರ್ಮಿಕ ಚೌಕಟ್ಟಿಗೆ ಒಳಗಾಗದೆ ಸಂಪೂರ್ಣ ಭಿನ್ನವಾಗಿ ನಿಂತಿರುವುದು ಖಲೀಲ್ ಗಿಬ್ರಾನನ ವಿಶೇಷ ಲಕ್ಷಣ. ಕವಿಯ ಮೂಲ ಆಶಯವನ್ನು ಸೊಗಸಾಗಿ ಕನ್ನಡದಲ್ಲಿ ಸೆರೆಹಿಡಿದ ಲೇಖಕಿ ಡಾ.ಕೆ. ಸರೋಜಾ ಅವರ ಸಾಮರ್ಥ್ಯವನ್ನು ಶ್ಲಾಘಿಸಬಹುದು. ಲೇಖಕಿಯವರ ಹೊಳಹುಗಳು ಹಾಗೂ ಟಿಪ್ಪಣಿಗಳು ಗಿಬ್ರಾನನ ಆಶಯವನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.