19ನೇ ಶತಮಾನದ ಪುರಿ ಜಗನ್ನಾಥ ಮತ್ತು ಛತ್ತೀಸಘಡದ ಅಸ್ಪೃಶ್ಯರ ಧಾರ್ಮಿಕ ದಂಗೆಯನ್ನು ಕುರಿತ ಅಧ್ಯಯನ ಹಾಗೂ ಪ್ರಬಂಧದ ಅನುವಾದವನ್ನು ’ ದಾರು ಪ್ರತಿಮಾ ನ ಪೂಜಿವೇ ’ ಕೃತಿಯು ಒಳಗೊಂಡಿದೆ.
ಒರಿಸ್ಸಾದ ಇತಿಹಾಸಕಾರ ಡಾ.ಫಣೀಂದಂ ದೇವ್, ಬಂಗಾಳದ ಇತಿಹಾಸಕಾರ್ತಿ, ಡಾ.ಇಶಿತ ಬ್ಯಾನರ್ಜಿದುಬೆ, ಹಾಗೂ ದೆಹಲಿಯ ಇತಿಹಾಸದ ಅಧ್ಯಾಪಕ ಡಾ.ಸೌರಬ್ ದುಬೆ ಅವರ ಪ್ರಬಂಧ ಹಾಗೂ ಅಧ್ಯಯನ ಲೇಖನಗಳನ್ನು ಜಿ. ರಾಜಶೇಖರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಒರಿಸ್ಸಾದ ಸಾಮಾಜಿಕ, ರಾಜಕೀಯ ಬದುಕು, 19ನೆಯ ಶತಮಾನದ ಉದ್ದಕ್ಕೂ ಪ್ರಕ್ಷುಬ್ಧವಾಗಿತ್ತು. ಈ ಕಾಲ ದೇಶ ಪರಿಸ್ಥಿತಿಯ ಜೊತೆ ಮಹಿಮಾಧರ್ಮ ತಳಕು ಹಾಕಿಕೊಂಡಿದೆ. ಈ ಧರ್ಮದ ಅಭ್ಯಾಸದ ಮಹತ್ವವಿರುವುದೇ ಇಲ್ಲಿ. ಆದರೆ 19ನೇ ಶತಮಾನದ ಒರಿಸ್ಸಾದ ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶ ಮತ್ತು ಅದು ರೂಪಿಸಿದ ಬುಡಕಟ್ಟು ಸಮುದಾಯ ಮತ್ತು ಇತರರ ಸಂಬಂಧಗಳು, ಬೇರೆ ಬೇರೆ ಬುಡಕಟ್ಟುಗಳ ನಡುವಿನ ಸಂಬಂಧಗಳು ಮತ್ತು ಬುಡಕಟ್ಟಿನ ಒಳಗಡೆಯೇ ಪರಸ್ಪರ ಸಂಬಂಧಗಳು, ಜೊತೆಗೆ 19ನೆಯ ಶತಮಾನದಲ್ಲಿ ಧರ್ಮದ ಸ್ವರೂಪದಲ್ಲಿ ಆಗುತ್ತಿದ್ದ ಪರಿವರ್ತನೆಗಳು ಹಾಗೂ ಸಾಮಾಜಿಕ ಶ್ರೇಣಿಗಳಲ್ಲಿ ನಡೆದ ಪಲ್ಲಟಗಳು- ಈ ಎಲ್ಲದರ ಬೇರುಗಳು, ವಸಾಹತುಶಾಹಿಯ ಕಾಲಕ್ಕಿಂತಲೂ ಹಿಂದಕ್ಕೆ ಚಾಚಿಕೊಳ್ಳುತ್ತವೆ.ಹಾಗಾಗಿ ಮಹಿಮಾಧರ್ಮದ ಚಳುವಳಿಯ ಹಿನ್ನೆಲೆಯನ್ನು ಸರಿಯಾಗಿ ವಿಶ್ಲೇಷಿಸಲು, ವಸಾಹತುಶಾಹಿಗೂ ಮೊದಲಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಬೇಕು.
ಒರಿಸ್ಸಾದ 19ನೇ ಶತಮಾನದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ರೂಪುಗೊಂಡ ಬಗೆಯನ್ನು ಅದರ ಐತಿಹಾಸಿಕ ಹಿನ್ನೆಲೆಯಲ್ಲಿ ಅಭ್ಯಸಿಸುವುದು ಈ ಪ್ರಬಂಧ ಅನುವಾದದ ಉದ್ದೇಶ.
©2024 Book Brahma Private Limited.