‘ನಾಲ್ಕನೇ ಎಕರೆ’ ತೆಲುಗಿನ ಮಿಥುನ ಕೃತಿಯ ಲೇಖಕರಾದ ಶ್ರೀರಮಣ ಅವರ ತೆಲುಗು ನೀಳ್ಗತೆಗಳ ಕನ್ನಡಾನುವಾದ. ಈ ನೀಳ್ಗತೆಯನ್ನು ಲೇಖಕ, ಅನುವಾದಕ ಅಜಯ್ ವರ್ಮಾ ಅಲ್ಲೂರಿ ಕನ್ನಡೀಕರಿಸಿದ್ದಾರೆ. ಛಂದ ಪ್ರಕಾಶನ ಪ್ರಕಟಿಸಿರುವ ಈ ಕೃತಿಯಲ್ಲಿ ರೈತರ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ, ಕಲಾತ್ಮಕವಾಗಿ, ಭಾವುಕವಾಗಿ ಚಿತ್ರಿಸುವ ಕತೆ ನೇಪಥ್ಯದಲ್ಲಿದ್ದುಕೊಂಡೇ ರೈತರ ಬದುಕಿನ ಮೇಲೆ ಆಕ್ರಮಣ ಮಾಡುವ ಕಾರ್ಪೊರೇಟ್ ವ್ಯವಸ್ಥೆಯ ಕ್ರೌರ್ಯವನ್ನು ಆರ್ದ್ರವಾಗಿ ಹೇಳುತ್ತದೆ. ಇದು ಸದ್ಯದ ಭಾರತದ ಸ್ಥಿತಿ-ಗತಿಯನ್ನು ಚಿತ್ರಿಸುವ ಸಮಕಾಲೀನ ಕಥನ. ರೈತ ಕುಟುಂಬಗಳ ಎರಡು ತಲೆಮಾರುಗಳ ಸಂಘರ್ಷವನ್ನು ಈ ಕತೆ ಸಮರ್ಥವಾಗಿ ಕಟ್ಟಿಕೊಡುತ್ತದೆ.
ಈ ನೀಳ್ಗತೆಯನ್ನು ಅನುವಾದಿಸಿರುವ ಅಜಯ್ ವರ್ಮಾ ಅಲ್ಲೂರಿ ಅವರು ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅಭ್ಯಾಸ ಮಾಡುತ್ತಿದ್ದು, ಈಗಾಗಲೇ ಮಾಡಿರುವ ಸಾಧನೆ ಅಚ್ಚರಿ ಮೂಡಿಸುವಂತಹದ್ದು. ನಾಲ್ಕು ಕೃತಿಗಳನ್ನು ರಚಿಸಿರುವ ಇವರಿಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ-ಬಹುಮಾನಗಳು ಸಂದಿವೆ. ಗುಂಟೂರು ಜಿಲ್ಲೆಯ ತೆನಾಲಿ ಸೀಮೆಯ ಗ್ರಾಮ್ಯವನ್ನು ಹೊಂದಿರುವ ಮೂಲಕೃತಿಯನ್ನು, ತಮ್ಮ ರಾಯಚೂರು ಸೀಮೆಯ ರೈತರ ಭಾಷೆಯನ್ನು ಬಳಸಿಕೊಂಡು ಯಶಸ್ವಿಯಾಗಿ ಅನುವಾದಿಸಿದ್ದಾರೆ.
©2024 Book Brahma Private Limited.