ಲೇಖಕ ಜಗದೀಶಶರ್ಮಾ ಸಂಪ ಅವರು ವಿದುರನ ಅದ್ಭುತ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿರುವ ಕೃತಿ ಮಹಾಭಾರತದ ನೈಜ ನಾಯಕ ‘ವಿದುರ’. ನೀತಿ, ನಿಯತಿ, ನಿಯತ್ತು ಎಂಬ ಉಪಶೀರ್ಷಿಕೆಯನ್ನಿದು ಹೊಂದಿದೆ. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ವಿದುರನ ಚರಿತ್ರೆಯೇ ಈ ಕೃತಿ. ಅವನ ಕಥೆ, ಅವನು ಹೇಳಿದ ಕಥೆ ಮತ್ತು ಅವನು ಹೇಳಿದ ನೀತಿಗಳನ್ನು ಓದುವ ಸೌಕರ್ಯಕ್ಕಾಗಿ ವಿಭಾಗಿಸಿದೆ. ವಿದುರ ಇರುವ ಘಟ್ಟಗಳನ್ನು ವಿಸ್ತಾರವಾಗಿಯೂ, ಅವನಿಲ್ಲದ ಘಟ್ಟಗಳನ್ನು ಸಂಕ್ಷೇಪವಾಗಿಯೂ ಹೇಳಿದೆ. ಆದ್ಯಂತ ವ್ಯಾಪಿಸಿದ ವಿದುರನ ಕುರಿತು ಹೇಳುವಾಗ ಸಹಜವಾಗಿಯೇ ಸಮಗ್ರ ಮಹಾಭಾರತವೇ ಬಂದಿದೆ. ಪುಣೆಯ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್’ಟಿಟ್ಯೂಟ್, ಸುದೀರ್ಘ ಕಾಲ ಅನೇಕ ವಿದ್ವಾಂಸರ ಪರಿಶ್ರಮದಿಂದ ಕಳೆದ ಶತಮಾನದಲ್ಲಿ ಸಂಪಾದಿಸಿದ, ಮಹಾಭಾರತ ಕ್ರಿಟಿಕಲ್ ಎಡಿಷನ್’ನ ಇಲೆಕ್ಟ್ರಾನಿಕ್ ಟೆಕ್ಸ್ಟ್ ಅನ್ನು ಇಲ್ಲಿ ಆಧಾರವಾಗಿ ಇಟ್ಟುಕೊಳ್ಳಲಾಗಿದೆ. ಇದು ಯಥಾವತ್ ಅನುವಾದವಲ್ಲ, ನಿರ್ದಿಷ್ಟ ಓದುಗರನ್ನು ಗಮನದಲ್ಲಿ ಇಟ್ಟುಕೊಂಡ ಪುನಃಕಥನ. ಹಾಗೆಂದು ವ್ಯಾಸರನ್ನು ಅತಿಕ್ರಮಿಸಿಲ್ಲ. ಅವರ ಭಾವಕ್ಕೆ ಅನುಗುಣವಾಗಿ ಬರೆದಿದೆ ಎಂದಿದ್ದಾರೆ.
©2024 Book Brahma Private Limited.