ಪ್ರಸ್ತುತ ಇಸ್ಲಾಂ ಧರ್ಮದ ಕುರಿತಂತೆ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ನಿವಾರಿಸುವ ಉದ್ದೇಶದಿಂದ ಬರೆದ ಕೃತಿಯಾಗಿದೆ ಇದು. ಸೈಯದ್ ಹಾಮಿದ್ ಮುಪ್ಪಿನ್ ಅವರು ಈ ಕೃತಿಯನ್ನು ರಚಿಸಿದ್ದಾರೆ. ಮುಸ್ಲಿಮ್ ದ್ವೇಷವನ್ನು ಮುಂದಿಟ್ಟು ತಮ್ಮ ರಾಜಕೀಯ ಉದ್ದೇಶಗಳನ್ನು ಸಾಧಿಸುವ ನಾಯಕರು ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ ಸ್ಪಷ್ಟ ಉತ್ತರವನ್ನು ನೀಡುತ್ತದೆ. ರಾಜಕೀಯ ಕಾರಣಗಳಿಗಾಗಿ ಕೆಲವು ಹಿತಾಸಕ್ತಿಗಳು ಹರಡಿರುವ ವದಂತಿಗಳು ಮತ್ತು ಸುಳ್ಳುಗಳ ಬಗ್ಗೆ ವಿವರಿಸುತ್ತದೆ. ಈ ವದಂತಿಗಳನ್ನು ಹರಡುವ ಮಂದಿಗಳ ಬಲೆಗೆ ಬೀಳುವ ಅಮಾಯಕರ ಆತಂಕ, ಗೊಂದಲಗಳನ್ನು ಈ ಕೃತಿ ನಿವಾರಿಸಿದೆ. ಮುಸ್ಲಿಮರ ಕುರಿತಂತೆ ಇತರ ಧರ್ಮೀಯರಲ್ಲಿರುವ ತಪ್ಪುಕಲ್ಪನೆಗಳನ್ನಷ್ಟೇ ಅಲ್ಲ, ಸ್ವತಃ ಮುಸ್ಲಿಮರೂ ಇಸ್ಲಾಂನ ಕುರಿತಂತೆ ನಂಬಿರುವ ಗೊಂದಲಗಳನ್ನೂ ಈ ಕೃತಿ ತಿಳಿಗೊಳಿಸುತ್ತದೆ. ಲಾಂಛನ, ಲವ್ ಜಿಹಾದ್, ಹಸಿರು ಬಣ್ಣ, ತಲಾಖ್, ಖುಲಾ, ಫತ್ವಾ, ಕಾಫಿರ್, ಹಲಾಲ್ ಹರಾಮ್, ಮದ್ರಸಾ ಮತ್ತು ಮಕ್ತಬಾ, ಅದಾನ್, ಜಿಹಾದ್, ಭಯೋತ್ಪಾದನೆ, ಜನಸಂಖ್ಯಾ ಭೂತ, ಮುಸ್ಲಿಮರ ಓಲೈಕೆ, ವೈಯಕ್ತಿಕ ಕಾನೂನು ಇವೆಲ್ಲವನ್ನು ಹೇಗೆ ಭೂತ ಕನ್ನಡಿಯಲ್ಲಿ ತೋರಿಸಲಾಗುತ್ತಿದೆ ಮತ್ತು ವಾಸ್ತವದಲ್ಲಿ ಅದರ ಹಿನ್ನೆಲೆಗಳು ಎನ್ನುವುದನ್ನು ತಿಳಿ ಹೇಳುವ ಕೆಲಸವನ್ನು ಈ ಕೃತಿ ಮಾಡುತ್ತದೆ. ಜನಸಂಖ್ಯೆಯ ಕುರಿತಂತೆ, ಭಯೋತ್ಪಾದಕರ ಬಗ್ಗೆ ಕೆಲವು ಹಿತಾಸಕ್ತಿಗಳು ಮಂಡಿಸುವ ಅಂಕಿ ಸಂಖ್ಯೆಗಳನ್ನು ಮುಸ್ಲಿಮರೇ ನಂಬಿ ಕೀಳರಿಮೆಯಿಂದ ನರಳುವುದಿದೆ. ಈ ಕೃತಿ ಏಕಕಾಲದಲ್ಲಿ ಮುಸ್ಲಿಮರಿಗೂ, ಮುಸ್ಲಿಮೇತರರಿಗೂ ಕೆಲವು ಸಿದ್ಧ ಮಾದರಿಯ ಜನಪ್ರಿಯ ಸುಳ್ಳುಗಳ ಹಿಂದಿರುವ ರಾಜಕೀಯದ ಕುರಿತು ಸರಳವಾಗಿ ವಿವರಗಳನ್ನು ನೀಡುತ್ತದೆ.
©2024 Book Brahma Private Limited.