ಎಲ್. ಬಸವರಾಜು ಅವರು ಬೌದ್ಧಧರ್ಮದ ಕುರಿತು ಕನ್ನಡಲ್ಲಿ ರಚಿಸಿದ ಮಹಾಕಾವ್ಯ ‘ಸೌಂದರನಂದ’. ಗೌತಮ ಬುದ್ಧನಿಂದ ಸ್ಥಾಪಿಸಲ್ಪಟ್ಟ ಬೌದ್ಧ ಧರ್ಮ ಜೈನ ಧರ್ಮಕ್ಕಿಂತಲೂ ಮೊದಲು ಅಸ್ತಿತ್ವದಲ್ಲಿತ್ತು. ಅದು ಪ್ರಾಚೀನ ಕರ್ನಾಟಕದ ಜನಜೀವನದ ಮೇಲೆ ತುಂಬಾ ಪ್ರಭಾವ ಬೀರಿತ್ತು. ಅದಕ್ಕೆ ಕದರಿ, ಬಳ್ಳಗಾವಿ ಮುಂತಾದ ಸ್ಥಳಗಳ ಅವಶೇಷಗಳೇ ಇಂದಿಗೂ ಸಾಕ್ಷಿ. ಭಾರತದ ಇತರ ಪ್ರದೇಶಗಳಲ್ಲಿ, ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಒದಗಿದ ದುರ್ಗತಿಯೇ ಬೌದ್ದಧರ್ಮಕ್ಕೆ ಉಂಟಾಗಿ, ಕರ್ನಾಟಕದಲ್ಲಿ ರಚಿತವಾಗಿದ್ದಿರಬಹುದಾದ ಬೌದ್ಧ ಸಾಹಿತ್ಯ ನಾಶವಾಗಿಯೊ ಅಥವಾ ಅಸಡ್ಡೆಗೊಳಗಾಗಿಯೋ ಕಣ್ಮರೆಯಾಯಿತು. ದಶಾವತಾರದಲ್ಲಿ ಬುದ್ದ ಅಡಕವಾದ ಮೇಲಂತೂ ಬೌದ್ಧ ಧರ್ಮದ ವೈಚಾರಿಕ ಚಿಂತನೆಗಳು ಈ ನೆಲದಲ್ಲಿ ಮತ್ತೆ ಮೊಳಕೆಯೊಡೆಯಲೇ ಇಲ್ಲ. ಅಂದಿನ ಬೌದ್ಧ ವಿಹಾರಗಳು ಇಂದು ದೇವಾಲಯ ಅಥವಾ ಅನ್ಯ ಮತ ಪೀಠಗಳಾಗಿವೆ. ಇಂದು ವಿದ್ವಾಂಸರು ರಚಿಸಿರುವ ಭಾರತೀಯ ಧಾರ್ಮಿಕ ಚರಿತ್ರೆ ಶುದ್ದವೂ ಅಲ್ಲ, ಪರಿಪೂರ್ಣವೂ ಅಲ್ಲ. ಅದು ಫ್ಯೂಡಲ್ ವ್ಯವಸ್ಥೆಯ ಆಶ್ರಯದಲ್ಲಿ ಪ್ರತಿಷ್ಠಿತ ಜನಾಂಗ ರಚಿಸಿದ ಪೂರ್ವಗ್ರಹದ ಧಾರ್ಮಿಕ ಇತಿಹಾಸ, ಅಸಡ್ಡೆಗೆ ಒಳಗಾಗಿರುವ ನಾಸ್ತಿಕ ಪಂಥಗಳು ಮತ್ತು ಅಲಕ್ಷಿತ ಶ್ರೀ ಸಾಮಾನ್ಯರ ಧಾರ್ಮಿಕ ಪಂಥಗಳು ಲಿಖಿತ ಮತ್ತು ಮೌಖಿಕ ಮೂಲಗಳ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳಿಂದ ಮರು ಮೌಲ್ಯಗೊಂಡ ಭಾರತೀಯ ಧಾರ್ಮಿಕ ಮತ್ತು ಸಾಹಿತ್ಯ ಚರಿತ್ರೆಗಳ ಮರುಚಿಂತನೆ ತುರ್ತಾಗಿ ಆಗಬೇಕಿದೆ. ಭಾರತದಲ್ಲಿ ನಾಶವಾದ ಅಥವಾ ಅಸಡ್ಡೆಗೆ ಒಳಗಾಗಿರುವ ಬೌದ್ದ ಮತ್ತು ಇತರೆ ಪಂಥಗಳ ಕೃತಿಗಳು ಚೀನಾ, ಟಿಬೆಟ್ಟು, ಪೂರ್ವ ಮತ್ತು ಮಧ್ಯ ಏಷ್ಯಾ ದೇಶಗಳ ಭಾಷೆಗಳಲ್ಲಿ ದೊರೆಯುತ್ತವೆ. ಅವುಗಳ ಪ್ರಭಾವ ದಟ್ಟವಾಗಿರುವ ಭಾರತದ ಉತ್ತರ-ಪೂರ್ವ (ಈಶಾನ್ಯ) ಪ್ರಾಂತ್ಯಗಳ ಜನಾಂಗೀಯ ಸಾಂಸ್ಕೃತಿಕ ಅಧ್ಯಯನವೇ ಇದನ್ನು ಸಾಬೀತು ಪಡಿಸುತ್ತದೆ. ಗಂಗಾ ಬಯಲ ಸಂಸ್ಕೃತಿಯ ಪ್ರಭಾವಕ್ಕಿಂತ ದೂರವಾದ ಈ ಪ್ರಾಂತ್ಯಗಳ ರೀತಿ-ನೀತಿ, ಆಚಾರ-ವಿಚಾರಗಳು ತೀವ್ರವಾಗಿ ಭಿನ್ನವಾಗಿವೆ. ಬೌದ್ಧಧರ್ಮದೊಂದಿಗೆ ಶಾಕ್ತ, ಶೈವ ಮತ್ತು ವೈಷ್ಣವ ಪಂಥಗಳು ಹೊಂದಿದ್ದ ಸಂಬಂಧ ಮತ್ತು ಪರಸ್ಪರ ಕೊಳು-ಕೊಡಿಗೆಯ ಅಧ್ಯಯನ, ಸಾಂಸ್ಕೃತಿಕ ಅಧ್ಯಯನದ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತದೆ. ಈ ಪ್ರಾಂತ್ಯಗಳಿಗೆ ಹಿಂದೂ ಧರ್ಮ ಈಶಾನ್ಯ ದಿಕ್ಕಿನಿಂದ ಪ್ರವೇಶಿಸಿತು ಎಂಬ ಸಂಗತಿ ಅಚ್ಚರಿಯನ್ನುಂಟು ಮಾಡುತ್ತದೆ. ಅದೂ ಅಲ್ಲದೆ, ಬೌದ್ಧ ಧರ್ಮ ಶಾಸ್ತ್ ಮತ್ತು ಶೈವ ಪಂಥಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅಂಶದ ಬಗ್ಗೆ ವಿದ್ವಾಂಸರು ಗಮನ ಹರಿಸಬೇಕಿದೆ. ಅಂತಹ ಧರ್ಮದ ಕುರಿತ ಸೌಂದರವನ ಕೃತಿ ಬುದ್ಧನ ತತ್ವಾದರ್ಶಗಳ ಬಗ್ಗೆ ಮಾಹಿತಿ ನೀಡುತ್ತದೆ.
©2024 Book Brahma Private Limited.