ಸಿಹಿ ಇಲ್ಲದ ಸಕ್ಕರೆ ಹೇಗೆ ಸಾಧ್ಯವಿಲ್ಲವೋ ಹಾಗೆ ಶಕ್ತಿಯಿಲ್ಲದೆ ಶಿವನಿಲ್ಲ. ಶಿವ-ಶಕ್ತಿ ಸಮ್ಮಿಲನವೇ ಈ ಜಗತ್ತು. ಇದನ್ನು ತಿಳಿದ ಡಾ|| ಲಕ್ಷ್ಮಿ ನಾರಾಯಣಪ್ಪ (ಸಾಹಿತ್ಯ ನಾಮ ಶೀಲನಾ)ರವರು ಜಗತ್ತಿನ ಆಧಾರ ಭೂತವಾದ, ಚೈತನ್ಯದಾಯಿನಿಯಾದ ಶಕ್ತಿಯನ್ನು ಕುರಿತು ಶ್ರೀ ದುರ್ಗಾ ಸಪ್ತಶತಿ ಎಂಬ ಕಿರು ಹೊತ್ತಿಗೆಯನ್ನು ರಚಿಸಿದ್ದಾರೆ. ಆರಂಭದಲ್ಲಿ ಗಣಪತಿ ಮತ್ತು ಇಷ್ಟದೇವತೆ ನರಸಿಂಹ ಇತ್ಯಾದಿ ದೇವತೆಗಳನ್ನು ಸ್ತುತಿಸಿ, ದುರ್ಗಾ ಸಪ್ತಶತಿಯ ಪಾರಾಯಣದ ಕ್ರಮವನ್ನೂ ಸಹ ಪೀಠಿಕೆಯಲ್ಲಿ ಸೂಚಿಸುವುದರೊಂದಿಗೆ ತಮ್ಮ ನಿಷ್ಕಲ್ಮಶ ಭಕ್ತಿಯನ್ನು ಪ್ರಕಟಿಸಿದ್ದಾರೆ. ಇಲ್ಲಿ ಅಭಿವ್ಯಕ್ತಿಗೊಂಡಿರುವ ಕಥಾವಸ್ತು ಶಕ್ತಿಯು ಅಸುರರನ್ನು ಸಂಹರಿಸಿ, ಜಗತ್ತಿಗೆ ಆನಂದ ನೀಡಿದಳೆಂಬುದಾಗಿದ್ದರೂ, ಅರಿವಿನಾಳಕ್ಕಿಳಿದು ನೋಡಿದಾಗ ಪ್ರತಿಯೊಬ್ಬ ವ್ಯಕ್ತಿಯೂ ತನ್ನಂತರಂಗದಲ್ಲಿ ಹುದುಗಿದ ಅಸುರೀತನದ ವಿರುದ್ಧ ಹೋರಾಡುವ, ತನ್ನಲ್ಲಿಯೇ ಇರುವ ಚಿತ್ಕಲೆಯನ್ನು ಜಾಗೃತಾವಸ್ಥೆಗೆ ತರುವ ಪ್ರಯತ್ನಕ್ಕೆ ತಕ್ಕ ಸೂತ್ರಗಳೆನ್ನಬಹುದು. ಭಾರತೀಯ ಪರಂಪರೆಯಲ್ಲಿ ಋಷಿಗಳು ವೇದದಲ್ಲಿನ ಅರಿವನ್ನು ಅನೇಕ ಪುರಾಣಗಳಲ್ಲಿ ವಿಸ್ತ್ರತಗಳಿಸಿ, ಜನತೆಯ ಅಂತರಂಗದ ಅರಿವನ್ನು ಜಾಗೃತಗೊಳಿಸಲು ಯತ್ನಿಸಿದ್ದಾರೆ. ಅದೇ ಹಿನ್ನೆಲೆಯಲ್ಲಿ ಶ್ರೀಯುತರು ಚರಿತ್ರೆಯಲ್ಲಿ ಶಕ್ತಿಯ ಲೀಲಾವಳಿಗಳನ್ನು ಶ್ರೀ ಸಾಮಾನ್ಯನಿಗೂ ಹೃದ್ಯಂಗಮವಾಗಿರುವ ಸ್ತುತಿಗೀತೆಗಳನ್ನು ತಾಳ, ಲಯಬದ್ಧ ಸಹಿತವಾಗಿ ರಚಿಸಿದ್ದಾರೆ. ಈ ಗೀತೆಗಳಲ್ಲಿ ಅಖಂಡ ಬ್ರಹ್ಮಾಂಡದೊಡಯನಾದ ಪರಬ್ರಹ್ಮ ವಸ್ತು ತಾನೇ ಎರಡಾಗಿ ಶಿವ-ಶಿವೆಯಾದುದು, ಮತ್ತು ರಕ್ಕಸರ ಸೊಕ್ಕಿಳಿಸಿ ಜೀವಜಗತ್ತಿಗೆ ನೆಮ್ಮದಿ ನೀಡಿದುದು ವರ್ಣಿತವಾಗಿದೆ.
©2024 Book Brahma Private Limited.