ಕೇವಲ ನಾಲ್ಕನೆಯ ತರಗತಿಯ ತನಕ ಓದಿ, ವ್ಯವಸಾಯವೆ ಮೂಲ ಕಸುಬಾಗಿಸಿಕೊಂಡಿರುವ ಆರ್ಥಿಕವಾಗಿ ಸದೃಢರಲ್ಲದ, ಭೌತಿಕ ಮತ್ತು ಮಾನಸಿಕವಾಗಿ ಅತ್ಯಂತ ಸದೃಢರಾಗಿರುವ ಬಸವಣ್ಣಪ್ಪ ನಮ್ಮ ಪುರಾಣ, ಗೇಯ, ಗಾಯನಗಳ ಉಳಿವಿಗೆ ಮುಂದಾಗಿರುವ ಸುಜ್ಞಾನಿ.
ತಾಲ್ಲೂಕಿನ ಹಿರಿಯ ಸಾಹಿತಿ, ಗಾನ ಪಾಂಡಿತ್ಯ, ಧೀಮಂತ, ಸಾಮಾಜಿಕ ಕ್ರಿಯಾಶೀಲತೆಯುಳ್ಳ ಕಡಸೂದು ಬಸವಣ್ಣಪ್ಪ ಅವರು ತಮ್ಮ ಇಳಿ ಪ್ರಾಯದಲ್ಲಿ ಮಹಾನ್ ಕೃತಿಯೊಂದನ್ನು ರಚಿಸಿ ಜೀವನ ಸಾರ್ಥಕಗೊಳಿಸಿದ್ದಾರೆ. ಅವರು ಈಚೆಗೆ ಬರೆದ, ಶ್ರೀ ಸತ್ಯನಾರಾಯಣ ವ್ರತ ಎಂತಹವರು ಸರಳವಾಗಿ ಓದಿ ಮನನ ಮಾಡಿಕೊಳ್ಳುವಂತಹ ಕೃತಿ, ಅದರ ಬೆನ್ನಲ್ಲೆ ಈಗ ಶಿವ ಗಾನ ಚಿಂತಾಮಣಿ ಎಂಬ ಶಿವಲೀಲಾ ಮಹಿಮೆ ಕುರಿತು ಮಹತ್ಕೃತಿಯನ್ನು ಕೂಡ ಬರೆದಿದ್ದಾರೆ. ಪುರಾಣ ಕಥೆಯನ್ನು ಕಾವ್ಯ ರೂಪಕ್ಕಿಳಿಸಿ ಜನ ಸಾಮಾನ್ಯರಿಗೆ ತಿಳಿಸಿ, ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಇಡೀ ಕನ್ನಡ ನಾಡಿನಾದ್ಯಂತ ಬಿತ್ತರಿಸುವ ಮಹದಾಸೆ ಇರಿಸಿ, ಹಲವು ಪುರಾಣ ಗ್ರಂಥವನ್ನು ಓದಿ, ತಿಳಿದು ಮೂಲ ಆಕರಗಳಿಗೆ ಧಕ್ಕೆ ಬಾರದಂತೆ ಹೇಳಬೇಕಾದ ವಿಚಾರದ ಸಮತೋಲನಕ್ಕೆ ಪೂರಕವಾಗಿ ವಾಸ್ತವ ಜಗತ್ತಿನ ಪರಿಧಿಯಲ್ಲಿ ಮನೋಜ್ಞವಾಗಿ ರಚಿಸಿದ್ದಾರೆ. ಪ್ರಸ್ತುತ ಶಿವಗಾನ ಚಿಂತಾಮಣಿ ಹೀಗೆ ಸರಳ ಕಾವ್ಯ ರೂಪದಲ್ಲಿ ಹೊರತರುತ್ತಿರುವುದು ಸಂತಸದ ಹಾಗೂ ಹೆಮ್ಮೆಯ ಸಂಗತಿ, ಅದರಲ್ಲೂ ಜನಪದ ಶೈಲಿಯುಳ್ಳ ಇವರ ಕಾವ್ಯದಲ್ಲಿ ಪ್ರಾಸದ ಶೈಲಿ ಅತ್ಯಂತ ಮನೋಜ್ಞವಾಗಿದೆ. ಈ ನಿಟ್ಟಿನಲ್ಲಿ ಈ ಕಿರು ಕಾವ್ಯಾ ನಾಸ್ತಿಕರನ್ನು ಆಸ್ತಿಕದೆಡೆಗೆ ಸೆಳೆಯುವುದರಲ್ಲಿ ಎರಡು ಮಾತಿಲ್ಲ ಎನ್ನಬಹುದು.
©2024 Book Brahma Private Limited.