‘ಮಡಿವಾಳ ಮಾಚಿದೇವರ ಸಮಗ್ರ ವಚನಗಳು’ ಕೃತಿಯು ಅಶೋಕ ದೊಮ್ಮಲೂರು ಸಂಪಾದಕತ್ವದ ವಚನಸಂಕಲನವಾಗಿದೆ. ಕೃತಿಯ ಕುರಿತು ವೀರಣ್ಣ ರಾಜೂರ ಹೀಗೆ ಹೇಳಿದ್ದಾರೆ; ಹನ್ನೆರಡನೆಯ ಶತಮಾನದ ಕಾಯಕಜೀವಿ ವಚನಕಾರರಲ್ಲಿ ಮಡಿವಾಳ ಮಾಚಿದೇವನದು ಎದ್ದು ಕಾಣುವ ಹೆಸರು. ಈತ ಗಣಾಚಾರ ನಿಷ್ಠೆಯ ವೀರಮಾಹೇಶ್ವರ, ಅನುಭವ ಮಂಟಪದ ಸಕ್ರಿಯ ಮಹಾಶರಣ, ವೃತ್ತಿಯಿಂದ ಕಲ್ಯಾಣದ ಶರಣರ ವಸ್ತಗಳ ಮೈಲಿಗೆಯನ್ನು ತೊಳೆಯುವುದು, ವಚನಗಳ ಮೂಲಕ ಮರ್ತ್ಯರ ಮನದ ಮೈಲಿಗೆಯನ್ನು ಕಳೆಯುವುದು ಈತನ ಮಹಾಕಾಯಕ. ಮಾಚಿದೇವ 'ಕಲಿದೇವರ ದೇವ' ಅಂಕಿತದಲ್ಲಿ ಅಧಿಕ ಸಂಖ್ಯೆಯ ವಚನ ರಚನೆ ಮಾಡಿದ್ದಾನೆ. ಅವು ಒಂದೆಡೆ ಇಡಿಯಾಗಿ ದೊರೆಯದೆ, ವಿವಿಧ ವಚನ ಸಂಕಲನಗಳಲ್ಲಿ ಎಡೆಪಡೆದಿವೆ. ಇವುಗಳನ್ನು ಡಾ. ಫ.ಗು. ಹಳಕಟ್ಟಿಯವರು ಆದಿಯಾಗಿ ಅನೇಕ ವಿದ್ವಾರಿಸರು ಕಾಲಕಾಲಕ್ಕೆ ತಮ ತಮಗೆ ದೊರೆತಷ್ಟನ್ನು ಸಂಪಾದಿಸಿ ಪ್ರಕಟಿಸುತ್ತ ಬಂದಿದ್ದಾರೆ. ಅವೆಲ್ಲವನ್ನು ಕ್ರೋಡೀಕರಿಸಿ, ಮತ್ತೆ ಹೆಚ್ಚಿಗೆ ದೊರೆತವನ್ನೂ ಸೇರಿಸಿ ಸಮಗ್ರ ವಚನ ಸಂಪುಟ 8 ರಲ್ಲಿ ಒಟ್ಟು 346 ವಚನಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಆದರೆ ಮಡಿವಾಳ ಮಾಚಯ್ಯನ ವಚನಗಳು ಇಷ್ಟು ಮಾತ್ರವಲ್ಲ; ಇನ್ನೂ ಇದಕ್ಕೂ ಹೆಚ್ಚಿನ ಸಂಖ್ಯೆಯ ವಚನಗಳು ದೊರೆಯುತ್ತವೆ. ಎಂಬುದನ್ನು ಈ ಕೃತಿಯ ಮೂಲಕ ತೋರಿಸಿಕೊಟ್ಟವರು ದೊಮ್ಮಲೂರ ಆಶೋಕ ಅವರು. ಮಡಿವಾಳ ಪರಂಪರೆಯಲ್ಲಿ ಹುಟ್ಟಿಬಂದ ಅಶೋಕ ಅವರು ಮೂಲತಃ ತಂತ್ರಜ್ಞಾನ ಪದವೀಧರರು. ಆದರೂ ಮಾಚಿದೇವನ ಮೇಲೆ, ಹಾಗೆಯೇ ಶರಣಸಾಹಿತ್ಯದ ಮೇಲೆ ಉತ್ಕಟ ಪ್ರೀತಿ, ಆಸಕ್ತಿ-ಗೌರವಗಳನ್ನು ಇಟ್ಟುಕೊಂಡವರು. ಹೀಗಾಗಿ ಶರಣಸಾಹಿತ್ಯಕ್ಕೆ ಸಂಬಂಧಿಸಿದ ಹಸ್ತಪ್ರತಿಗಳನ್ನು ಶೋಧಿಸುವುದು ಮತ್ತು ಅವುಗಳನ್ನು ಡಿಜಿಟಲ್ ಮಾಧ್ಯಮಕ್ಕೆ ಅಳವಡಿಸುವುದು ಅವರ ಒಂದು ಮುಖ್ಯ ಹವ್ಯಾಸವಾಗಿ ಬೆಳೆದುಬಂದಿದೆ. ಈ ದಿಸೆಯಲ್ಲಿ ಇದೂವರೆಗೆ ಅವರು ಮಾಡಿದ ಸಂಗ್ರಹ ಒಂದು ಅಪೂರ್ವ ದಾಖಲೆಯಾಗಿ, ಈ ಕುರಿತು ಅಧ್ಯಯನ ಮಾಡುವ ಸಂಶೋಧಕರಿಗೆ ಅಮೂಲ್ಯ ಆಕರ ಸಾಮಗ್ರಿಯನ್ನು ಒದಗಿಸುವಂತಿವೆ. ಪ್ರಸ್ತುತ ಕೃತಿಯಲ್ಲಿ ಅಶೋಕ ಅವರು ಮಡಿವಾಳ ಮಾಚಿದೇವನ ಒಟ್ಟು 736 ವಚನಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಸಮಗ್ರ ವಚನ ಸಂಪುಟದಲ್ಲಿ ಸೇರದ 390 ಹೆಚ್ಚಿನ ವಚನಗಳು ಇರುವುದು ವಿಶೇಷ. ಇವುಗಳನ್ನು ದೇವರ ಹಿಪ್ಪರಗಿ ಮತ್ತು ಬಸವ ಸಮಿತಿಯಲ್ಲಿ ಹೊಸದಾಗಿ ದೊರೆತ ಹಸ್ತಪ್ರತಿಗಳಿಂದ ಮತ್ತು ಈ ಹಿಂದೆ ಬೇರೆ ಬೇರೆ ವಿದ್ವಾಂಸರು ಪ್ರಕಟಿಸಿದ ಮುದ್ರಿತ ಕೃತಿಗಳಿಂದ ಕಲೆಹಾಕಿದ್ದಾರೆ. ಇವುಗಳನ್ನು ಸಂಗ್ರಹಿಸುವಲ್ಲಿ, ಈಗಾಗಲೇ ಪ್ರಕಟವಾದ ವಚನಗಳ ಜೊತೆ ಹೋಲಿಸಿ ನೋಡಿ ಹೊಸದನ್ನು ಗುರುತಿಸುವಲ್ಲಿ, ಒಟ್ಟು ವಚನಗಳನ್ನು ಆಕರ ಸಹಿತವಾಗಿ ಜೋಡಿಸುವಲ್ಲಿ ಅಶೋಕ ಅವರ ಹತ್ತಾರು ವರ್ಷಗಳ ನಿರಂತರ ಪರಿಶ್ರಮ-ತಾಳ್ಮೆ-ಅವಧಾನಗಳು ಕೆಲಸ ಮಾಡಿವೆ.
©2024 Book Brahma Private Limited.