ಸಾಹಿತಿ ಲಕ್ಷ್ಮೀ ಜಿ ಪ್ರಸಾದ್ ಅವರ ‘ಕರಾವಳಿಯ ಸಾವಿರದೊಂದು ದೈವಗಳು’ ಕೃತಿಯು ಒಂದು ಐತಿಹಾಸಿಕ, ಸಾಂಸ್ಕೃತಿಕ, ವಿಶ್ಲೇಷಣಾತ್ಮಕ ನೋಟ. ಕೊಡಗು ಸೇರಿದಂತೆ ಕರಾವಳಿಯಿಂದ ಕೊಟ್ಟಾಯಂವರೆಗಿನ ತುಳು, ಕನ್ನಡ, ಮಲಯಾಳ, ಕೊಡವ ಪರಿಸರದ ಸಾವಿರದ ಇನ್ನೂರ ಇಪ್ಪತ್ತೆಂಟು ದೈವಗಳ ಮಾಹಿತಿಯುಳ್ಳ ಗ್ರಂಥವಿದು. ನಾ.ಮೊಗಸಾಲೆ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದು, ತುಳಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲುಗರಿ ಇದು ಎಂಬುದಾಗಿ ಈ ಕೃತಿಯನ್ನು ಬಣ್ಣಿಸಿದ್ದಾರೆ.
ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಪರಿಚಯ.
ತುಳುನಾಡಿನಲ್ಲಿ ಅಥವಾ ಕರಾವಳಿ ಭಾಗದಲ್ಲಿ (ಕರ್ನಾಟಕ-ಕೇರಳ) ದೇವರಿಗಿಂತ ದೈವಗಳ ಆರಾಧನೆ ಹೆಚ್ಚು. ಇದು ತುಳು ಸಂಸ್ಕೃತಿಯ ಬಹುಮುಖ್ಯ ಭಾಗವೂ ಹೌದು. ಹಾಗೆಂದು ಎಷ್ಟು ದೈವಗಳ ಆರಾಧನೆ ನಡೆಯುತ್ತದೆ ಎಂದು ಪ್ರಶ್ನಿಸಿದರೆ ಇದಮಿತ್ಥಂ ಎಂದು ಉತ್ತರಿಸಲು ಸಾಧ್ಯವಿಲ್ಲ. ಹೀಗಾಗಿಯೇ (ಸಾವಿರದ ಒಂದು ದೈವಗಳು) ಎಂಬ ವಾಡಿಕೆ ಮಾತಿದೆ. ಈ ವಾಡಿಕೆ ಮಾತಿಗೆ ಪೂರಕವಾಗಿ ಡಾ.ಲಕ್ಷ್ಮೀ ಜಿ. ಪ್ರಸಾದ್ ಅವರ 'ಕರಾವಳಿಯ ಸಾವಿರದೊಂದು ದೈವಗಳು ಒಂದು ಐತಿಹಾಸಿಕ, ಸಾಂಸ್ಕೃತಿಕ, ವಿಶ್ಲೇಷಣಾತ್ಮಕ ನೋಟ' ಕೃತಿಯು ಮೂಡಿಬಂದಿದೆ.
ಭೂತಾರಾಧನೆ ಬಹಳ ಸಂಕೀರ್ಣ. ಇದರ ಅರಿವಿಲ್ಲದೇ ಅಧ್ಯಯನ ಸುಲಭವಲ್ಲ. ಈ ಹಿಂದೆ 'ಅಣಿ ಅರಳದ ಸಿರಿ ಸಿಂಗಾರ ಪುಸ್ತಕದಲ್ಲಿ 1,435 ದೈವಗಳ ಪಟ್ಟಿ ಮಾಡಿ, ಕೆಲವು ಅಪರೂಪದ ದೈವಗಳ, ವಿಶಿಷ್ಟ ಆರಾಧನೆಯ ಬಗ್ಗೆ ಲಕ್ಷ್ಮೀ ಅವರು ವಿವರವನ್ನು, ಈ ಹೊಸ ಕೃತಿಯಲ್ಲಿ ಅದರ ವಿಸ್ತರಣೆಯಾಗಿ, ಸಮಗ್ರ ಮಾಹಿತಿಯನ್ನು ಕರಾವಳಿಯ ಸಾವಿರದೊಂದು ದೈವಗಳು –ಒಂದು ಐತಿಹಾಸಿಕ, ಸಾಂಸ್ಕೃತಿಕ, ವಿಶ್ಲೇಷಣಾತ್ಮಕ ನೋಟ ಹೊತ್ತು ತಂದಿದ್ದಾರೆ.
ಕರಾವಳಿಯಲ್ಲಿ ಆರಾಧನೆ ಇರುವ 2,330 ದೈವಗಳ ಹೆಸರನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದರಲ್ಲಿ ಕೊಡಗು ಸೇರಿದಂತೆ ಕಾರವಾರದಿಂದ ಕೊಟ್ಟಾಯಂವರೆಗಿನ ತುಳು, ಕನ್ನಡ, ಮಲಯಾಳ ಹಾಗೂ ಕೊಡವ ಪರಿಸರದ ದೈವ ನರ್ತಕ ಕಲಾವಿದರು ಹೇಳುವ ಪಾಡ್ಡನಗಳನ್ನು, ಐತಿಹ್ಯಗಳನ್ನು ಮತ್ತು ಇತಿಹಾಸದ ಆಕರಗಳನ್ನು ಆಧರಿಸಿ 1,228 ದೈವಗಳ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಲಾಗಿದೆ. ಕಾಡ್ಯನಾಟ, ಪಾಣರಾಟ, ಸರ್ಪಂಕಳಿ, ಸರ್ಪಂತುಳ್ಳಲ್, ನಾಗಮಂಡಲಗಳಲ್ಲಿ ಅರಾಧನೆ ಪಡೆಯುವ ದೈವಗಳ ಸಂಕ್ಷಿಪ್ತ ಮಾಹಿತಿಯೂ ಇದರಲ್ಲಿದೆ. ಜೊತೆ ಅಪರೂಪದ ದೈವಗಳ ಫೋಟೊಗಳೂ ಇಲ್ಲಿವೆ. ಪೊಲೀಸ್ ವೇಷದಲ್ಲಿರುವ 'ಪೊಲೀಸ್ ತೆಯ್ಯಂ', ಬ್ರಾಹ್ಮಣ ವೇಷಧಾರಿ 'ಕಚ್ಚೆಭಟ್ಟ', ಅರಬ್ಬಿ ಭೂತ, ಶತ್ರು ರಾಷ್ಟ್ರದ ಸೇನೆಯ ಕೈಗೆ ಸಿಕ್ಕು ಗರೊಡಿಗೆ ಮಣೆ ಮಂಚದ ಹರಕೆ ಹೇಳಿ ತಪ್ಪಿಸಿಕೊಂಡು ಬಂದ 'ಮಿಲಿಟ್ರಿ ಅಜ್ಜ', ಒಂದು ಕಣಜದಷ್ಟು ಸೀಯಾಳ, ಹೊದಳನ್ನು ಕೊಟ್ಟರೂ ಸಾಕಾಗದ 'ಬಲ್ಲಮಂಜತ್ತಾಯ' ಮುಂತಾದ ಹಿಂದೆಂದೂ ಕೇಳದ ಅಪರೂಪದ ದೈವಗಳ ಮಾಹಿತಿಯನ್ನು ಕೃತಿ ಒಳಗೊಂಡಿದೆ.
ಕಾಸರಗೋಡು ಜಿಲ್ಲೆಯ ಕೋಳ್ಳೂರಿನಲ್ಲಿ ಜನಿಸಿದ ಲಕ್ಷ್ಮೀ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಕನ್ನಡ ಉಪನ್ಯಾಸಕಿ, ತುಳು ಸಂಸ್ಕೃತಿ ಕುರಿತು ಎಂ.ಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿ ಪಡೆದ ಲಕ್ಷ್ಮೀ ಅವರು ದೈವಾರಾಧನೆಯ ಬಗ್ಗೆ ಕಳೆದ 20 ವರ್ಷಗಳಿಂದ ಹೆಚ್ಚಿನ ಕ್ಷೇತ್ರ ಕಾರ್ಯ ಮಾಡಿದ ಅನುಭವವುಳ್ಳವರಾಗಿದ್ದಾರೆ. ತುಳುನಾಡಿನ ದೈವ ಭೂತಗಳ ಕುರಿತಾಗಿ ಎ.ಸಿ.ಬರ್ನೆಲ್, ಡಾ.ಬಿ.ಎ.ವಿವೇಕ ರೈ, ಡಾ.ಕೆ.ಚಿನ್ನಪ್ಪಗೌಡ, ರಘುನಾಥ ಎಂ,ವರ್ಕಾಡಿ ಮುಂತಾದವರು ಬರೆದ ಲೇಖನ, ಕೃತಿಗಳಲ್ಲಿ ಸುಮಾರು ಮುನ್ನೂರೈವತ್ತು ನಾಲ್ಕೂರು ದೈವಗಳ ಮಾಹಿತಿ ಮೊದಲೇ ದಾಖಲಾಗಿದೆ. ಈ ಅಧ್ಯಯನಕಾರರು ದಾಖಲಿಸಿರುವ ಮಾಹಿತಿಗಳನ್ನೊಳಗೊಂಡೇ ಲಕ್ಷ್ಮೀ ತಮ್ಮ ಅಧ್ಯಯನದ ಸೌಧವನ್ನು ಬೃಹದಾಗಿ ನಿರ್ಮಿಸಿದ್ದಾರೆ. ಸ್ವಂತ ಅಧ್ಯಯನದಿಂದ ಉಳಿದ ಎಲ್ಲ ದೈವಗಳ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಚಾಮುಂಡಿ ಮತ್ತು ಸೇರಿಗೆ ದೈವಗಳು, ಗುಳಿಗ ಮತ್ತು ಸೇರಿಗೆ ದೈವಗಳು, ಬ್ರಾಹ್ಮಣ, ಮುಸ್ಲಿಂ ಮೂಲದ ದೈವಗಳು ಹೀಗೆ ವಿಷಯದ ಅಧ್ಯಯನಕ್ಕೆ ಅನುಕೂಲವಾಗುವಂತೆ ಮುನ್ನೂರ ಹದಿನೈದು ಅಧ್ಯಾಯಗಳಲ್ಲಿ ವಿವರಣೆಯನ್ನು ನೀಡಲಾಗಿದೆ.
©2024 Book Brahma Private Limited.