ರಾಮಾನುಜಾಚಾರ್ಯರ ಸಹಸ್ರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಕಟಗೊಂಡಿರುವ, ಲೇಖಕಿ ಪಿ.ಚಂದ್ರಿಕಾ ಅವರು ಸಂಪಾದಿಸಿರುವ 'ಭಕ್ತಿಯ ಬೆರಗು' ಹಲವು ಕಾರಣಗಳಿಗಾಗಿ ಮಹತ್ವದ ಗ್ರಂಥ. ನಮ್ಮಲ್ಲಿ ಹಾಸು ಹೊಕ್ಕಾಗಿರುವ 'ಭಕ್ತಿ ಪಂಥ ಮತ್ತು ಪರಂಪರೆ'ಯ ಕುರಿತು ಹಲವು ವಿದ್ವಾಂಸರು, ಆಸಕ್ತರು ಬರೆದ ಬರಹಗಳ ಸಂಕಲನವನ್ನು ಹೊರತರುವ ವಿಚಾರವೇ ವಿಶಿಷ್ಟವಾದದ್ದು. 'ಭಕ್ತಿ' ಎಂಬ ಪದವನ್ನು ಕೇಳಿದಾಗಲೆಲ್ಲ-ನೆನೆದಾಗಲೆಲ್ಲ 'ಮುಗ್ಧತೆ' ಎಂಬ ಇನ್ನೊಂದು ಪದ ನನ್ನೊಳಗೆ ಓಗೊಡುವುದು’- ಎನ್ನುವ ಮಾತು, ಬರಹ, ಮತ್ತು ಅವರ ಆಲೋಚನೆಯ ಸ್ವಗತ ಲಹರಿ ಹಿರಿಯ ವಿದ್ವಾಂಸರೂ, ಚಿಂತಕರೂ ಆದ ಲಕ್ಷ್ಮೀಶ ತೋಳ್ಪಾಡಿಯವರದ್ದು.
ಎಂ.ಬಸವಣ್ಣನವರ ಅಭಿಪ್ರಾಯದಂತೆ, ’ಭಕ್ತಿ ಒಂದು ಮಾನಸಿಕ ಸಂಸ್ಥಿತಿ’ ಎಂದಿದ್ದಾರೆ, ನಮ್ಮ ಆಧ್ಯಾತ್ಮಿಕ ಪಯಣದ ಆರಂಭವು ಆಗುವುದೇ ಭಕ್ತಿಯಿಂದ' ಎಂಬ ನಿಲುವು ಕಲಾ ಇತಿಹಾಸಕಾರರಾದ ಕೆ. ವಿ. ಸುಬ್ರಹ್ಮಣ್ಯಂ ಅವರದ್ದು. ವಿಮರ್ಶಕರು, ಲೇಖಕರೂ ಆದ ರಹಮತ್ ತರೀಕೆರೆ 'ಧರ್ಮ ಮತ್ತು ಭಕ್ತಿಗಳು ಎರಡೂ ಬೇರೆ ಬೇರೆ ಸ್ವರೂಪದವು ಎಂದು ಈ ಹಿಂದೆ ಹೇಳಿದ್ದರೂ, ಅವು ಏಕೀಭವಿಸಬಲ್ಲವು’ ಎಂದಿದ್ದಾರೆ. ಹೀಗೆ ವಿಭಿನ್ನ ನೆಲೆಯ ಚಿಂತನೆಗಳನ್ನೊಳಗೊಂಡ ಹಲವು ಬರಹಗಳು, ವಿಶ್ಲೇಷಣೆಗಳು ’ಭಕ್ತಿಯ ಬೆರಗು’ ಕೃತಿಯಲ್ಲಿ ಕಾಣಬಹುದು. ಅನೇಕ ಲೇಖಕರ ಜತೆ, ಸಂಶೋಧಕರಾದ, ಷ. ಶೆಟ್ಟರ್, ಲೇಖಕ ಓ.ಎಲ್ .ನಾಗಭೂಷಣಸ್ವಾಮಿ, ಕವಿ ಎಚ್.ಎಸ್. ವೆಂಕಟೇಶಮೂರ್ತಿ, ಎಚ್.ಎಸ್.ಶಿವಪ್ರಕಾಶ್, ಆನಂದ ಝುಂಜರವಾಡ ಮೊದಲಾದವರ ಮೌಲಿಕ ಬರಹಗಳನ್ನೊಳಗೊಂಡ ಈ ಪುಸ್ತಕ ಗಂಭೀರ ಓದಿಗೆ, ಅನೇಕ ಚಿಂತನೆಗಳ ಅರಿವಿಗೆ ದಾರಿ ಮಾಡಿಕೊಟ್ಟಿದೆ.
©2024 Book Brahma Private Limited.