ದಂತಚೋರ ವೀರಪ್ಪನ್ ಕುರಿತು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ ಮಾಡಲಾದ ಕೃತಿ 'ವೀರಪ್ಪನ್-ದಂತಚೋರನ ಬೆನ್ನಟ್ಟಿ'. ಕಾಡಿನಲ್ಲಿ ದಂತ, ಮರ ಕದ್ದು, ಮಾರಾಟ ಮಾಡುತ್ತಾ ಪೊಲೀಸರಿಗೆ ತಲೆನೋವಾಗಿದ್ದ ವೀರಪ್ಪನ್ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ಈ ಕೃತಿಯು ಅಂತಹ ಕೆಲವು ಮಾಹಿತಿಗಳ ಜೊತೆಗೆ ವೀರಪ್ಪನ್ ಬದುಕು ಹೇಗಿತ್ತು. ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದೇಗೆ ಎಂಬುದನ್ನು ಎಳೆಎಳೆಯಾಗಿ ವಿವರಿಸಲಾಗಿದೆ. ಇದೊಂತರ ಪತ್ತೇದಾರಿ ಕಥೆ ಎಂದು ಅನ್ನಿಸಿದರೂ ತಪ್ಪೇನಿಲ್ಲ. ಪೊಲೀಸರ ಸಾಹಸ, ಅವರಿಗಾದ ಸಮಸ್ಯೆಗಳು ಈ ಕೃತಿಯಲ್ಲಿ ವಿವರವಾಗಿ ನೀಡಲಾಗಿದೆ. ನಿವೃತ್ತ ಡಿಜಿಪಿ ಹಾಗೂ ಲೇಖಕ ಡಾ.ಡಿ.ವಿ.ಗುರುಪ್ರಸಾದ್ ಕನ್ನಡಕ್ಕೆ ಅನುವಾದಿಸಿದ್ದಾರೆ. ವೀರಪ್ಪನ್ ಬೇಟೆಯ ಕಾರ್ಯಾಚರಣೆಯೊಂದರ ಭಾಗವಾದ ವಿಜಯ ಕುಮಾರ್ ಅವರ ನೇರ ಅನುಭವವೇ ಈ ಪುಸ್ತಕದ ವಿಶೇಷತೆ. ವೀರಪ್ಪನ್ ಬೇಟೆ ಸಂದರ್ಭದಲ್ಲಿನ ಕಾಡಿನ ಅನುಭವಗಳನ್ನೂ ವಿಜಯ ಕುಮಾರ್ ದಾಖಲಿಸಿದ್ದಾರೆ. ಒಂದು ಸಲ ಆನೆ ದಾಳಿಗೆ ಬಲಿಯಾಗಬೇಕಾದ ಸಂದರ್ಭವೂ ಸೃಷ್ಟಿಯಾಗಿತ್ತು. ಕಾಡಲ್ಲಿ ತಮ್ಮ ಸಿಬ್ಬಂದಿ ಜೊತೆ ವಿಜಯಕುಮಾರ್ ನಡೆಯುತ್ತಿದ್ದಾಗ ಸ್ವಲ್ಪ ದೂರದಲ್ಲಿ ಆನೆಯೊಂದು ತನ್ನ ಮರಿಗೆ ಮೊಲೆಯುಣಿಸುತ್ತಿತ್ತು. ಅದನ್ನು ದೂರದಿಂದಲೇ ಎಲ್ಲರೂ ಸದ್ದು ಮಾಡದೇ ನೋಡುತ್ತಿದ್ದಾಗ, ಒಬ್ಬ ಯುವ ಕಾನ್ಸ್ಟೇಬಲ್ ಫೋಟೊ ಕ್ಲಿಕ್ಕಿಸಲು ಸಮೀಪಕ್ಕೆ ತೆರಳಿದ. ಆನೆ ತನ್ನ ಸೊಂಡಿಲಿನಿಂದ ಅವನನ್ನು ಎತ್ತಿ ಎಸೆದ ರಭಸಕ್ಕೆ ಕೈಮೂಳೆಗಳು ಮುರಿದು ಹೋದವಂತೆ. ಆನೆಯ ಸೊಂಡಿಲಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಸ್ನಾಯುಗಳಿದ್ದು, ಅವು ಸೆಟೆದಾಗ ಅದರ ಸೊಂಡಿಲು ಉಕ್ಕಿಗಿಂತಲೂ ಗಟ್ಟಿಯಾಗುತ್ತದೆ. ಅತಿಶೀಘ್ರದಲ್ಲಿಯೇ ಚಲಿಸುವ ಶಕ್ತಿಯನ್ನೂ ಹೊಂದುತ್ತದೆ. ಆನೆಯು ಗಂಟೆಗೆ ಸುಮಾರು 25 ಕಿ.ಮೀ ವೇಗದಲ್ಲಿ ನಡೆಯಬಲ್ಲದು ಎನ್ನುವಂಥ ಕುತೂಹಲಕಾರಿ ಮಾಹಿತಿಯನ್ನೂ ಲೇಖಕರು ನೀಡಿದ್ದಾರೆ. ಅಂದು ಕಾನ್ಸ್ಟೇಬಲ್ ಮೇಲೆ ಎರಗಿದ್ದ ಆ ಆನೆ, ಬಳಿಕ ವಿಜಯಕುಮಾರ್ ಅವರತ್ತ ನುಗ್ಗಿತ್ತು. ಇಂಥ ರೋಮಾಂಚಕ ದೃಶ್ಯಗಳು ಪುಸ್ತಕದಲ್ಲಿ ಸಾಕಷ್ಟಿವೆ.
©2024 Book Brahma Private Limited.